ಮೈನ್‌ಪುರಿ: ಉತ್ತರ ಪ್ರದೇಶ ಪೊಲೀಸರು ಮತ್ತು ಅರಣ್ಯ ಇಲಾಖೆಯ ಜಂಟಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 405 ಅಪರೂಪದ ಆಮೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾನ್ಪುರ ಪೊಲೀಸ್ ವಿಶೇಷ ಕಾರ್ಯಪಡೆ, ಮೈನ್‌ಪುರಿ ಅರಣ್ಯ ಶ್ರೇಣಿ ಮತ್ತು ಗೋರಖ್‌ಪುರದ ವನ್ಯಜೀವಿ ನಿಯಂತ್ರಣ ವಿಭಾಗದ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದವು. ಈ ವೇಳೆ ಉಸ್ರಾಹಾರ್ – ಕಿಶ್ನಿ ರಸ್ತೆಯಲ್ಲಿ ಅನುಮಾನಸ್ಪದ ಕಾರೊಂದನ್ನು ತಡೆದು ತಪಾಸಣೆ ನಡೆಸಲಾಯಿತು. ಈ ವೇಳೆ ಕಳ್ಳಸಾಗಣೆ ಮಾಡುತ್ತಿದ್ದ ಅಪರೂಪದ ಆಮೆಗಳನ್ನು ಪತ್ತೆ ಹಚ್ಚಲಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಕರಣ ಸಂಬಂಧ ಬರೇಲಿ ಮೂಲದ ಅಮಿತ್ ಯಾದವ್ ಮತ್ತು ಕುಲದೀಪ್ ಚತುರ್ವೇದಿ ಅವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಸಂತೋಷ್ ಮತ್ತು ರೂಪ್ ಸಿಂಗ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಆಮೆಗಳನ್ನು ಉತ್ತರಾಖಂಡದ ಉಧಮ್ ಸಿಂಗ್ ನಗರಕ್ಕೆ ಸಾಗಿಸುತ್ತಿದ್ದರು, ಅಲ್ಲಿಂದ ಅವುಗಳನ್ನು ಚೀನಾಕ್ಕೆ ಕಳುಹಿಸಲು ಯೋಜಿಸಲಾಗಿತ್ತು. ಈ ಹಿಂದೆ ಆಮೆಗಳನ್ನು ಹಿಡಿದು ತಲಾ ₹8,000–10,000ಕ್ಕೆ ಮಾರಾಟ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಎಸ್‌ಟಿಎಫ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಮೈನ್‌ಪುರಿ ಅರಣ್ಯ ವಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.