ADVERTISEMENT

ಸಾಲ ಮರುಪಾವತಿಸದ ವ್ಯಕ್ತಿಯೊಬ್ಬರ ಎರಡೂವರೆ ವರ್ಷದ ಮಗಳ ಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 1:45 IST
Last Updated 7 ಜೂನ್ 2019, 1:45 IST
   

ಲಖನೌ: ಸಾಲ ಮರುಪಾವತಿಸಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಎರಡೂವರೆ ವರ್ಷದ ಮಗುವನ್ನು ಹತ್ಯೆ ಮಾಡಿ ಅದರ ಕಣ್ಣುಗಳನ್ನು ಕಿತ್ತ ಭೀಕರ ಘಟನೆ ಉತ್ತರಪ್ರದೇಶದ ಅಲೀಗಢದಲ್ಲಿ ನಡೆದಿದೆ.

‘ಎರಡೂವರೆ ವರ್ಷದ ಹೆಣ್ಣು ಮಗುವೊಂದು ನಾಪತ್ತೆಯಾಗಿರುವ ಬಗ್ಗೆ ಮೇ 31ರಂದು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೂರು ದಿನಗಳ ನಂತರ ಪೊಲೀಸರು ಆ ಮಗುವಿನ ಶವವನ್ನು ಪತ್ತೆ ಮಾಡಿದ್ದರು. ಮಗುವನ್ನು ಹತ್ಯೆ ಮಾಡಿ ಅದರ ಕಣ್ಣುಗಳನ್ನು ಕೀಳಲಾಗಿದೆ ಎಂದು ಶವಪರೀಕ್ಷೆಯಿಂದ ತಿಳಿದುಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ತಂದೆಯು ಸ್ಥಳೀಯ ಯುವಕನೊಬ್ಬನಿಂದ ಹತ್ತು ಸಾವಿರ ರೂಪಾಯಿ ಸಾಲ ಪಡೆದಿದ್ದರು. ಅದನ್ನು ಮರಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಮಗುವಿನ ಹತ್ಯೆಗೆ ಇದೇ ಕಾರಣ ಇರಬಹುದು ಎಂಬ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಸಾಲ ನೀಡಿದ್ದ ಯುವಕನನ್ನು ವಿಚಾರಣೆಗೆ ಒಳಪಡಿಸಿದ್ದರು. ಆ ಸಂದರ್ಭದಲ್ಲಿ, ಬಾಲಕಿಯ ತಂದೆ ಸಾಲ ಮರುಪಾವತಿ ಮಾಡಲಿಲ್ಲ ಎಂಬ ಕಾರಣಕ್ಕೆ, ಸ್ನೇಹಿತನೊಬ್ಬನ ಸಹಾಯ ಪಡೆದು ತಾನೆ ಮಗುವಿನ ಹತ್ಯೆ ನಡೆಸಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಇವರ ವಿರುದ್ಧ ದೂರು ದಾಖಲಿಸಲಾಗುವುದು. ತ್ವರಿತ ವಿಚಾರಣಾ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಗುವುದು’ ಎಂದು ಅಲೀಗಢದ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.