ADVERTISEMENT

ಆನ್‌ಲೈನ್‌ ರಮ್ಮಿ, ಪೋಕರ್‌ ಆಡಿದರೆ ಎರಡು ವರ್ಷ ಜೈಲು, ದಂಡ!

ಪಿಟಿಐ
Published 4 ಫೆಬ್ರುವರಿ 2021, 11:12 IST
Last Updated 4 ಫೆಬ್ರುವರಿ 2021, 11:12 IST
   

ಚೆನ್ನೈ: ಬೆಟ್ಟಿಂಗ್‌ ಸ್ವರೂಪ ಹೊಂದಿರುವ ರಮ್ಮಿ, ಪೋಕರ್‌ನಂಥ ಆನ್‌ಲೈನ್‌ ಜೂಜಾಟಗಳನ್ನು ಆಡಿದರೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವ, ಗರಿಷ್ಠ 10 ಸಾವಿರ ದಂಡ ವಿಧಿಸುವ ಕಾನೂನನ್ನು ತಮಿಳುನಾಡು ರೂಪಿಸಿದೆ.

ಈ ಕುರಿತ ತಿದ್ದುಪಡಿ ಕಾಯ್ದೆಯೊಂದನ್ನು ತಮಿಳುನಾಡು ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಯಿತು. ಆನ್‌ಲೈನ್‌ ಜೂಜನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ಪ್ರತಿಯಾಗಿ ಈ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡು ಜಾರಿಗೆ ತರುತ್ತಿದೆ.

ಕಂಪ್ಯೂಟರ್, ಯಾವುದೇ ಸಂವಹನ ಸಾಧನ ಅಥವಾ ಯಾವುದೇ ಇತರ ಗೇಮಿಂಗ್ ಸಾಧನಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ರಮ್ಮಿಯಂಥ ಆಟಗಳಲ್ಲಿ ಯಾವುದೇ ವ್ಯಕ್ತಿ ಪಣಕಟ್ಟಿ ಆಟವಾಡಬಾರದು ಎಂದು ಹೊಸ ಕಾಯಿದೆಯಲ್ಲಿ ಹೇಳಲಾಗಿದೆ.

ADVERTISEMENT

ಅಲ್ಲದೆ, ಆನ್‌ಲೈನ್‌ ಮೂಲಕ ಜೂಜಿನಂಥ ಆಟಗಳನ್ನು ಯಾರೂ ಆಯೋಜಿಸಬಾರದು, ಆಶ್ರಯ ಕಲ್ಪಿಸಬಾರದು ಎಂದೂ ಹೇಳಲಾಗಿದೆ. ಈ ನಿಯಮ ಉಲ್ಲಂಘಿಸುವವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ ಮೀರದ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶಗಳಿರುತ್ತವೆ.

ಒಂದು ವೇಳೆ ಯಾವುದಾದರೂ ಕಂಪನಿ, ಯಾವುದೇ ವ್ಯಕ್ತಿ, ಉಸ್ತುವಾರಿಯಿಂದ ಇಂಥ ಕೃತ್ಯ ನಡೆದರೆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಲಾಟರಿಯನ್ನು ಇದರಲ್ಲಿ ಸೇರಿಸಲಾಗಿಲ್ಲ. ಆನ್‌ಲೈನ್‌ನಲ್ಲಿ ಪಣಕ್ಕಿಟ್ಟು ಆಡುವಂಥ ಯಾವುದೇ ಆಟಗಳನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.