ADVERTISEMENT

ಟಯರ್‌ ಸ್ಫೋಟ ‘ದೇವರ ಆಟ’ವಲ್ಲ: ಬಾಂಬೆ ಹೈಕೋರ್ಟ್‌

Tyre burst human negligence

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 11:01 IST
Last Updated 12 ಮಾರ್ಚ್ 2023, 11:01 IST
...
...   

ಮುಂಬೈ (ಪಿಟಿಐ): ‘ವಾಹನದ ಚಕ್ರ ಸ್ಫೋಟಿಸುವುದು ದೇವರ ಆಟವಲ್ಲ, ಮಾನವನ ನಿರ್ಲಕ್ಷ್ಯ’ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಕಾರು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಪರಿಹಾರ ನೀಡುವುದರ ವಿರುದ್ಧ ವಿಮಾ ನಿಗಮ ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್‌ ಹೀಗೆ ಹೇಳಿದೆ.

2010ರ ಅಕ್ಟೋಬರ್‌ 25ರಂದು ಪುಣೆ–ಮುಂಬೈ ರಸ್ತೆಯಲ್ಲಿ ಕಾರಿನ ಟಯರ್‌ ಸ್ಫೋಟಗೊಂಡು ಸಂಭವಿಸಿದ್ದ ಅಪಘಾತದಲ್ಲಿ ಮಕರಂದ್‌ ಪಟವರ್ಧನ್‌ ಎಂಬುವವರು ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ₹1.25 ಕೋಟಿ ವಿಮೆ ನೀಡುವಂತೆ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿಲಿಟೆಡ್‌ ಎಂಬ ವಿಮಾ ಕಂಪನಿಗೆ ಮೋಟರ್‌ ಅಪಘಾತ ಪರಿಹಾರ ನ್ಯಾಯಪೀಠವು 2016ರಲ್ಲಿ ಆದೇಶ ನೀಡಿತ್ತು. ಟೈಯರ್‌ ಸ್ಫೋಟವನ್ನು ‘ದೇವರ ಆಟ’ ಎಂದು ಕರೆದಿದ್ದ ವಿಮಾ ಸಂಸ್ಥೆಯು, ಭಾರಿ ಮೊತ್ತದ ವಿಮಾ ಪರಿಹಾರವನ್ನು ನೀಡುವಂತೆ ನೀಡಲಾಗಿದ್ದ ಆದೇಶದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿತ್ತು. ವಿಮಾ ಸಂಸ್ಥೆಯ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಹತೋಟಿಗೆ ಮೀರಿದ ನೈಸರ್ಗಿಕ ವಿಕೋಪವನ್ನು ‘ದೇವರ ಆಟ’ ಎಂದು ಕರೆಯಲಾಗುತ್ತದೆ. ಟಯರ್‌ ಸ್ಫೋಟಗೊಳ್ಳುವುದು ಮಾನವನ ನಿರ್ಲಕ್ಷ್ಯದಿಂದ. ವಾಹನದ ಟಯರ್‌ನ ಸ್ಥಿತಿಯನ್ನು ಪರೀಕ್ಷಿಸುವುದು ಚಾಲಕ ಅಥವಾ ಮಾಲೀಕನ ಜವಾಬ್ದಾರಿ. ಈ ಕಾರಣ ನೀಡಿ ವಿಮೆ ನೀಡುವುದರಿಂದ ಸಂಸ್ಥೆ ನುಣುಚಿಕೊಳ್ಳಲಾಗುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.