ADVERTISEMENT

ಪರಿಶಿಷ್ಟ ವಿದ್ಯಾರ್ಥಿನಿಯರು ಬಡಿಸಿದ ಅನ್ನ ಎಸೆಯಿರಿ ಎಂದ ಬಾಣಸಿಗನ ಬಂಧನ

ಪಿಟಿಐ
Published 3 ಸೆಪ್ಟೆಂಬರ್ 2022, 13:31 IST
Last Updated 3 ಸೆಪ್ಟೆಂಬರ್ 2022, 13:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಬಾಲಕಿಯರು ಬಡಿಸಿದ ಅನ್ನವನ್ನು ಎಸೆಯಿರಿ ಎಂದು ಸೂಚಿಸಿದ ಬಾಣಸಿಗನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಲಾಲಾ ರಾಮ್ ಗುರ್ಜರ್ ಬಂಧಿತ ಆರೋಪಿ. ಈತ ತಯಾರಿಸಿದ್ದ ಮಧ್ಯಾಹ್ನದ ಊಟವನ್ನು ಬಾಲಕಿಯರು ಇತರ ವಿದ್ಯಾರ್ಥಿಗಳಿಗೆ ಬಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲಾ ರಾಮ್, ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರು ಬಡಿಸಿರುವ ಊಟವನ್ನು ಬಿಸಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಲಾ ರಾಮ್ ಮಾತು ಕೇಳಿ ವಿದ್ಯಾರ್ಥಿಗಳು ಊಟವನ್ನು ಚೆಲ್ಲಿದ್ದಾರೆ. ಈ ವಿಚಾರವನ್ನು ವಿದ್ಯಾರ್ಥಿನಿಯರು ಮನೆಯಲ್ಲಿ ತಿಳಿಸಿದ್ದರು. ಬಾಲಕಿಯರ ಸಂಬಂಧಿಕರು ಶಾಲೆಗೆ ಬಂದು ಬಾಣಸಿಗನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು ಎಂದೂ ಹೇಳಿದ್ದಾರೆ.

ADVERTISEMENT

ಲಾಲಾ ರಾಮ್ ವಿರುದ್ಧ ಗೋಗುಂದ ಪೊಲೀಸ್‌ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

‘ಲಾಲಾ ರಾಮ್ ಪ್ರತಿ ದಿನ ಊಟ ಬಡಿಸಲು ಮೇಲ್ಜಾತಿಯ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದ. ಆದರೆ ಅವರು ಸರಿಯಾಗಿ ಬಡಿಸದ ಕಾರಣ ಶಿಕ್ಷಕರೊಬ್ಬರು ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರಲ್ಲಿ ಬಡಿಸಲು ಹೇಳಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.