
ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ‘ಮಾತೋಶ್ರೀ’ ನಿವಾಸದ ಮೇಲೆ ಡ್ರೋನ್‌ವೊಂದು ಹಾರಾಡುತ್ತಿದ್ದುದು, ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.
ಠಾಕ್ರೆ ಅವರಿಗೆ ನೀಡಿರುವ ಝಡ್ ಪ್ಲಸ್ ಭದ್ರತೆಯನ್ನು ಉಲ್ಲಂಘಿಸಿ ಬೇಹುಗಾರಿಕೆ ಮಾಡಲಾಗುತ್ತಿಯೇ ಎಂಬ ಶಂಕೆ ವ್ಯಕ್ತವಾಗಿತ್ತು.
ಮುಂಬೈ ಮೆಟ್ರೊಪಾಲಿಟನ್ ಪ್ರದೇಶ ಅಭಿವೃದ್ಧಿ ಮಂಡಳಿಯು (ಎಂಎಂಆರ್‌ಡಿಎ) ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಸಮೀಕ್ಷೆ ಕೈಗೊಂಡ ಕಾರಣ ಡ್ರೋನ್ ಹಾರಿಸಲಾಗಿತ್ತು ಎಂದು ಬಳಿಕ ತಿಳಿದುಬಂದಿತು.
ಆದಾಗ್ಯೂ ಉದ್ಧವ್ ಅವರ ಪುತ್ರ, ಶಾಸಕ ಆದಿತ್ಯ ಠಾಕ್ರೆ, ನಿವಾಸಿಗಳಿಗೆ ಮಾಹಿತಿ ನೀಡದೆ ಸಮೀಕ್ಷೆ ಕೈಗೊಂಡ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
‘ಭಾನುವಾರ ಬೆಳಿಗ್ಗೆ ನಮ್ಮ ಮನೆಯ ಮೇಲೆ ಡ್ರೋನ್ ಹಾರಾಡುತ್ತಿತ್ತು. ಮಾಧ್ಯಮದಲ್ಲಿ ಈ ವಿಚಾರ ಪ್ರಸಾರವಾಗುತ್ತಿದ್ದಂತೆಯೇ ಎಂಎಂಆರ್‌ಡಿಎ ಸಮೀಕ್ಷೆಯ ಭಾಗವಾಗಿ ಮುಂಬೈ ಪೊಲೀಸರ ಅನುಮತಿಯೊಂದಿಗೆ ಡ್ರೋನ್ ಹಾರಿಸಲಾಗಿತ್ತು ಎಂದು ತಿಳಿಸಿದೆ. ಆದರೆ ಸಮೀಕ್ಷೆ ಹೆಸರಿನಲ್ಲಿ ಮನೆಯ ಒಳಗೆ ಡ್ರೋನ್ ಹಾರಿಸಬಹುದೇ’ ಎಂದು ಪ್ರಶ್ನಿಸಿದರು.
ಪೊಲೀಸರು ಅನುಮತಿ ನೀಡಿದ್ದರೆ, ನಿವಾಸಿಗಳಿಗೆ ಏಕೆ ಈ ಬಗ್ಗೆ ಮಾಹಿತಿ ನೀಡಲಿಲ್ಲ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.