ADVERTISEMENT

ಶಿವಸೇನಾ ನಿರ್ನಾಮ ಮಾಡಲು ಬಂಡಾಯ ಶಾಸಕರ ಯತ್ನ: ಉದ್ಧವ್‌

ಪಿಟಿಐ
Published 25 ಜುಲೈ 2022, 14:09 IST
Last Updated 25 ಜುಲೈ 2022, 14:09 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ    

ಮುಂಬೈ: ‘ಬಂಡಾಯ ಶಾಸಕರು ಶಿವಸೇನಾವನ್ನು ನಿರ್ನಾಮ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಭಾನುವಾರ ಆರೋಪಿಸಿದ್ದಾರೆ.

ದಕ್ಷಿಣ ಮುಂಬೈಯಲ್ಲಿ ಸ್ಥಾಪಿಸಲಾಗಿರುವ ಶಿವಸೇನಾ ವಾರ್ಡ್‌ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಹಿಂದುತ್ವ ಉಳಿಸಲು ಶಿವಸೇನಾ ರಾಜಕೀಯಕ್ಕೆ ಧುಮುಕಿದೆ. ಆದರೆ ಬಿಜೆಪಿ ತನ್ನ ರಾಜಕೀಯ ಹಿತಾಸಕ್ತಿಗಾಗಿ ಹಿಂದುತ್ವದ ಅಸ್ತ್ರ ಪ್ರಯೋಗಿಸುತ್ತಿದೆ’ ಎಂದು ದೂರಿದ್ದಾರೆ.

‘ಶಿವಸೇನಾವನ್ನು ಮುಗಿಸಲು ಮುಂದಾಗಿರುವ ಬಂಡಾಯ ಬಣದವರು ಅದಕ್ಕಾಗಿ ಏಜೆನ್ಸಿಯೊಂದನ್ನು ನೇಮಿಸಿಕೊಂಡಿದ್ದಾರೆ. ಈಗ ನಡೆಯುತ್ತಿರುವುದು ಹಣ ಹಾಗೂ ನಿಷ್ಠೆಯ ನಡುವಣ ಹೋರಾಟ. ಇದೇ 27ರಂದು ನನ್ನ ಜನ್ಮದಿನ. ಅಂದು ಶುಭಕೋರಲು ಹೂಗುಚ್ಛ ತರಬೇಡಿ. ಬದಲಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ಪಕ್ಷ ಬಲಪಡಿಸಿ’ ಎಂದು ತಿಳಿಸಿದ್ದಾರೆ.

ADVERTISEMENT

ಸಿಎಂ ಕಚೇರಿಗೆ ಎಷ್ಟು ಬಾರಿ ಭೇಟಿ ನೀಡಿದ್ದರು?: ‘ಅಧಿಕಾರದಲ್ಲಿದ್ದಾಗ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿಯವರ ಅಧಿಕೃತ ಕಚೇರಿಗೆ ಎಷ್ಟು ಬಾರಿ ಭೇಟಿ ನೀಡಿದ್ದರು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬಣ ಪ್ರಶ್ನಿಸಿದೆ.

‘ಅಧಿಕಾರ ಹೋದ ಮೇಲೆ ಉದ್ಧವ್‌ ಅವರ ಸಾರ್ವಜನಿಕ ಭೇಟಿ ಹೆಚ್ಚಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ಅವರು ಪಕ್ಷದ ಕಾರ್ಯಕರ್ತರಿಗಾಗಿ ಕಿಂಚಿತ್ತಾದರೂ ಸಮಯ ಮೀಸಲಿಟ್ಟಿದ್ದರೆ’ ಎಂದು ಶಿಂದೆ ಬಣದ ವಕ್ತಾರ ದೀಪಕ್‌ ಕೇಸರ್‌ಕರ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.