ADVERTISEMENT

ಚುನಾವಣೆ ಕಾರಣಕ್ಕೆ ಮುಸ್ಲಿಮರಿಗೆ ಕಿಟ್‌: ಉದ್ಧವ್‌ ಠಾಕ್ರೆ

ಪಿಟಿಐ
Published 27 ಮಾರ್ಚ್ 2025, 14:00 IST
Last Updated 27 ಮಾರ್ಚ್ 2025, 14:00 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ: ಈದ್ ಹಬ್ಬದ ಅಂಗವಾಗಿ ‘ಸೌಗತ್‌–ಇ–ಮೋದಿ’ ಹೆಸರಿನಲ್ಲಿ ಮುಸ್ಲಿಮರಿಗೆ ಬಿಜೆಪಿಯು ಕಿಟ್‌ ವಿತರಿಸಿರುವುದನ್ನು ಗುರುವಾರ ಟೀಕಿಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು, ‘ಬಿಹಾರ ಚುನಾವಣೆಯ ಕಾರಣಕ್ಕೆ ಬಿಜೆಪಿಯು ಹಿಂದುತ್ವವನ್ನು ಬಿಟ್ಟು ಜಿಹಾದ್‌ ಶಕ್ತಿಯ ಮೊರೆಹೋಗಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಬಗ್ಗೆ ಕಟುವಾಗಿ ಟೀಕಿಸಿದ ಉದ್ಧವ್, ‘ಇವರೆಲ್ಲ ನಕಲಿ ಹಿಂದುತ್ವವಾದಿಗಳು. ಹಿಂದುತ್ವವನ್ನು ಬಿಟ್ಟಿರುವುದಾಗಿ ಬಿಜೆಪಿ ಅಧಿಕೃತವಾಗಿ ಘೋಷಿಸಬೇಕು. ಜೆಸಿಬಿಗಳಿಂದ ಯಾರ ಮನೆಯನ್ನು ಕೆಡವಲಾಗಿದೆಯೋ ಮತ್ತು ಕೋಮುಸಂಘರ್ಷದಿಂದ ಯಾರು ಮೃತಪಟ್ಟಿದ್ದಾರೋ ಅಂಥವರ ಮನೆಯವರಿಗೆ ಕಿಟ್‌ಗಳನ್ನು ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ಬಿಜೆಪಿಯು ಇಬ್ಬಗೆಯ ನಿಲುವನ್ನು ಹೊಂದಿದೆ. ತಮ್ಮ ಅನುಕೂಲಕ್ಕಾಗಿ ಅವರು ಮುಸ್ಲಿಂ ಸಮುದಾಯವನ್ನು ಬಲಿಪಶು ಮಾಡುತ್ತಿದ್ದರು. ಆದರೆ, ಈಗ ಚುನಾವಣೆ ಕಾರಣಕ್ಕೆ ಸಿಹಿಯನ್ನು ಹಂಚುತ್ತಿದ್ದಾರೆ. ಮೊದಲು ನೀವು ನಿಮ್ಮ ಪಕ್ಷದ ಧ್ವಜದಿಂದ ಹಸಿರು ಬಣ್ಣವನ್ನು ತೆಗೆದುಹಾಕಿ’ ಎಂದು ಬಿಜೆಪಿಗೆ ಸವಾಲೆಸೆದಿದ್ದಾರೆ.

ADVERTISEMENT

‘ಹಿಂದೂ ಮಹಿಳೆಯರ ಮಂಗಳಸೂತ್ರಗಳನ್ನು ಈಗ ಯಾರು ರಕ್ಷಿಸುತ್ತಾರೆ? ನೈಜ ಹಿಂದುತ್ವ ಪಕ್ಷ ಈಗ ಅಸ್ತಿತ್ವದಲ್ಲಿ ಇದೆಯೇ? ‘ಸೌಗತ್‌–ಇ–ಸತ್ತಾ’ ಬಿಹಾರ ಮತ್ತು ಉತ್ತರ ಪ್ರದೇಶ ಚುನಾವಣೆಗೆ ಮಾತ್ರ ಸೀಮಿತವೇ ಅಥವಾ ಅದರ ಬಳಿಕ ಮುಂದುವರಿಯಲಿದೆಯೇ’ ಎಂದು ಉದ್ಧವ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.