ADVERTISEMENT

Pak ಜತೆ ಕ್ರಿಕೆಟ್ ಆಡಬಹುದು,ಆದರೆ ಸೇನೆಗೆ ನೆರವಾದ ವಾಂಗ್ಚುಕ್ ದೇಶದ್ರೋಹಿ:ಠಾಕ್ರೆ

ಪಿಟಿಐ
Published 27 ಸೆಪ್ಟೆಂಬರ್ 2025, 10:12 IST
Last Updated 27 ಸೆಪ್ಟೆಂಬರ್ 2025, 10:12 IST
   

ಮುಂಬೈ: ಭಾರತ ಕ್ರಿಕೆಟ್‌ ತಂಡವು ಪಾಕಿಸ್ತಾನದ ಜೊತೆ ಪಂದ್ಯಗಳನ್ನು ಆಡಬಹುದು, ಆದರೆ ದೇಶದ ಸೇನೆಗೆ ಸಹಾಯ ಮಾಡಿದ ವಿಜ್ಞಾನಿಯನ್ನು ದೇಶದ್ರೋಹಿಯಂತೆ ಬಿಂಬಿಸಲಾಗುತ್ತಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಲಡಾಕ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್ಚುಕ್ ಅವರನ್ನು ಬಂಧಿಸಲಾಗಿದ್ದು, ಇದನ್ನು ಉದ್ಧವ್‌ ಠಾಕ್ರೆ ವಿರೋಧಿಸಿದ್ದಾರೆ.

ದೇಶದ ಸೈನಿಕರಿಗೆ ಪ್ರತಿಕೂಲ ವಾತಾವರಣದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಸೋಲಾರ್‌ ಟೆಂಟ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿ ಸೋನಮ್ ವಾಂಗ್ಚುಕ್ ಅವರೊಂದಿಗೆ ಕೇಂದ್ರ ಸರ್ಕಾರವು ಅತಿ ಕೆಟ್ಟದ್ದಾಗಿ ವರ್ತಿಸಿದೆ. ಅವರನ್ನು ದೇಶದ್ರೋಹಿಯಂತೆ ಬಿಂಬಿಸಲಾಗುತ್ತಿದೆ. ಆದರೆ, ಪಾಕಿಸ್ತಾನದೊಂದಿಗೆ ಕ್ರಿಕೆಟ್‌ ಆಡಲು ಅನುಮತಿ ನೀಡಲಾಗಿದೆ. ಇದು ಯಾವ ರೀತಿಯ ದೇಶಪ್ರೇಮ ಎಂದು ಉದ್ಧವ್‌ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ದೇಶ ಪ್ರೇಮಿಗಳೆನಿಸಿಕೊಂಡವರು ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್‌ ಫೈನಲ್ ಪಂದ್ಯವನ್ನು ಬಹಿಷ್ಕರಿಸುವಂತೆ ಹಾಗೂ ಯಾವುದೇ ಕಂಪನಿಗಳು ಕೂಡ ಆ ಪಂದ್ಯಕ್ಕೆ ಜಾಹೀರಾತು ನೀಡದಂತೆ ಉದ್ಧವ್‌ ಠಾಕ್ರೆ ಅವರು ಕರೆ ನೀಡಿದ್ದಾರೆ.

ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತವು ಎರಡು ಪಂದ್ಯಗಳನ್ನು ಆಡಿದ್ದು, ಸೆ.28ರಂದು ಫೈನಲ್‌ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.