ADVERTISEMENT

ಮುಕ್ತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ನೆರವಾಗಲು ಯುಜಿಸಿಯಿಂದ ನಿಯಮ ಸಡಿಲಿಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2022, 14:01 IST
Last Updated 22 ಮೇ 2022, 14:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ:ಮುಕ್ತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಕೂಲವಾಗುವ ನಿಟ್ಟಿನಲ್ಲಿವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ನಿಯಮವನ್ನು ಸಡಿಲಗೊಳಿಸಿದೆ.

ಮುಕ್ತ ವಿಶ್ವವಿದ್ಯಾಲಯದ ಸ್ಥಾಪನೆಗೆ 40 ರಿಂದ 60 ಎಕರೆ ಜಮೀನು ಮೀಸಲಿಡುವ ಅಗತ್ಯವಿಲ್ಲ. 5 ಎಕರೆ ಸಾಕು ಎಂಬ ತಿದ್ದುಪಡಿಯನ್ನು ಯುಜಿಸಿ ಮಾಡಿದೆ.

ಇನ್ನಷ್ಟು ಮುಕ್ತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯುಜಿಸಿ (ಅನುದಾನಕ್ಕಾಗಿ ಮುಕ್ತ ವಿಶ್ವವಿದ್ಯಾಲಯಗಳ ಅರ್ಹತೆ) ನಿಯಮ–1998ಕ್ಕೆ ತಿದ್ದುಪಡಿ ತರಲಾಗಿದೆ. ಈ ಅಧಿಸೂಚನೆಯನ್ನು ಶುಕ್ರವಾರ ಹೊರಡಿಸಲಾಗಿದೆ.

ADVERTISEMENT

‘ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಜಮೀನು ಲಭ್ಯತೆ ತೊಡಕಾಗಬಾರದು. ಹಾಗಾಗಿ,ದೂರ ಶಿಕ್ಷಣ ಮತ್ತು ಆನ್‌ಲೈನ್‌ ಶಿಕ್ಷಣ ಒದಗಿಸಲು ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಈ ತಿದ್ದುಪಡಿ ತರಲಾಗಿದೆ. ಇದರಿಂದ ಸಂಸ್ಥೆಗಳು ಹಲವು ಸ್ಥಳಗಳಲ್ಲಿ ದೂರ ಶಿಕ್ಷಣ ಸೌಲಭ್ಯವನ್ನು ವೃದ್ಧಿಗೊಳಿಸಬಹುದು’ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್‌ ಕುಮಾರ್‌ ಅವರು ತಿಳಿಸಿದ್ದಾರೆ.

‘ಈ ಹಿಂದೆ ಮುಕ್ತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ 40 ರಿಂದ 60 ಎಕರೆ ಜಮೀನು ಮೀಸಲಿಡಬೇಕಾಗಿತ್ತು. ಇದರಿಂದ ನಗರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆ ಸ್ಥಾ‍ಪನೆ ಬಹಳ ಕಠಿಣವಾಗಿತ್ತು’ ಎಂದು ಅವರು ಹೇಳಿದ್ದಾರೆ.

ಕೇಂದ್ರ ಕಾಯ್ದೆಯಡಿ ಸ್ಥಾಪನೆಯಾದ ಮುಕ್ತ ವಿಶ್ವವಿದ್ಯಾಲಯಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.