ಬಠಿಂಡಾ: ತಾಯಿ ದಿನಗೂಲಿ ಕಾರ್ಮಿಕರು. ತಂದೆ ಗುರುದ್ವಾರದಲ್ಲಿ ‘ಗ್ರಂಥಿ’. ಇವರ ಮೂವರು ಪುತ್ರಿಯರು ಪಿಎಚ್.ಡಿ ಪ್ರವೇಶ, ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಅರ್ಹತೆಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್‌ಇಟಿ) ತೇರ್ಗಡೆಯಾಗಿದ್ದಾರೆ.
ಕನಿಷ್ಠ ಸಾಕ್ಷರತೆ ಹೊಂದಿರುವ ಪಂಜಾಬ್‌ನ ಮಾನಸಾ ಜಿಲ್ಲೆಯ ಬುಧ್‌ಲಾಡಾದ ರಿಂಪಿ ಕೌರ್ (28), ಬಿಯಾಂತ್ ಕೌರ್ (26) ಹಾಗೂ ಹರ್ದೀಪ್ ಕೌರ್ (23) ಸಾಧಕ ಸಹೋದರಿಯರು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಎನ್ಇಟಿ ಫಲಿತಾಂಶವನ್ನು ಈಚೆಗೆ ಪ್ರಕಟಿಸಿದ್ದು, ಈ ಮೂವರೂ ವಿವಿಧ ವಿಷಯಗಳಲ್ಲಿ ತೇರ್ಗಡೆಯಾಗಿದ್ದಾರೆ.
‘ನನ್ನ ಅಕ್ಕ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕಿಯಾಗಲು ಬಯಸಿದ್ದಾರೆ. ನಾನು ಮತ್ತು ನನ್ನ ತಂಗಿ ಜೆಆರ್‌ಎಫ್‌ಗಾಗಿ ಶ್ರಮಿಸುತ್ತಿದ್ದು, ನಾವು ಅದನ್ನು ಪಡೆಯುತ್ತೇವೆ ಎಂಬ ವಿಶ್ವಾಸ ನಮಗಿದೆ’ ಎಂದು ಬಿಯಾಂತ್ ಕೌರ್ ಹೇಳಿದರು.
‘ಅಧ್ಯಯನ ಮಾತ್ರ ನಮ್ಮನ್ನು ಬಡತನದಿಂದ ಹೊರಗೆ ಕರೆತರಬಲ್ಲದು. ಯಶಸ್ಸಿಗೆ ದೃಢ ನಿರ್ಧಾರ ಹಾಗೂ ಕಠಿಣ ಪರಿಶ್ರಮ ಬೇಕು ಎಂಬುದನ್ನು ನಾವು ಕಂಡುಕೊಂಡಿದ್ದೆವು’ ಎಂದು ಅವರು ತಿಳಿಸಿದರು.
ಮೂವರು ಸಹೋದರಿಯರಿಗೆ ಸಹೋದರನೊಬ್ಬನಿದ್ದು, ಆತ ಬಹುಕಾಲದಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾನೆ.
ಹರ್ದೀಪ್ ಎರಡನೇ ಬಾರಿಗೆ ಯುಜಿಸಿ–ನೆಟ್‌ನಲ್ಲಿ ಅರ್ಹತೆ ಗಳಿಸಿದ್ದು, ಜೆಆರ್‌ಎಫ್ ಪಡೆಯಲಿಕ್ಕಾಗಿ ಕಠಿಣ ಪರಿಶ್ರಮ ಹಾಕುತ್ತಿದ್ದಾರೆ.
‘ಮೂವರು ಹೆಣ್ಣುಮಕ್ಕಳು ನನಗೆ ಹೆಮ್ಮೆ. ಅವರ ಕಠಿಣ ಪರಿಶ್ರಮಕ್ಕೆ ಯಶಸ್ಸು ಸಿಕ್ಕಿದೆ. ತಮ್ಮ ಖರ್ಚನ್ನು ನಿಭಾಯಿಸಿಕೊಳ್ಳಲು ಕೆಲವು ದಿನ ಖಾಸಗಿ ಶಾಲೆಗಳಲ್ಲಿ ಕೆಲಸವನ್ನು ಮಾಡಿದ್ದರು. ಈಗ ತಮಗೆ ಬೇಕಾದುದನ್ನು ಪಡೆಯಲು ಸಮರ್ಥರಾಗಿರುವುದು ನನಗೆ ಸಂತಸ ತಂದಿದೆ’ ಎಂದು ಇವರ ತಂದೆ ಬಿಕ್ಕರ್ ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.