ADVERTISEMENT

ಉನ್ನತ ಶಿಕ್ಷಣ: ಭಾರತದಲ್ಲೇ ಅವಕಾಶ ಕಲ್ಪಿಸಲು ಸಮಿತಿ ರಚನೆ

ಕೋವಿಡ್‌–19 ಪಿಡುಗಿನ ಕಾರಣದಿಂದಾಗಿ ಭಾರತಕ್ಕೆ ವಾಪಾಸಾಗಿರುವ ಸಾವಿರಾರು ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 14:41 IST
Last Updated 24 ಜುಲೈ 2020, 14:41 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ವಿದೇಶಗಳಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಕೋವಿಡ್‌–19 ಕಾರಣದಿಂದಾಗಿ ಭಾರತಕ್ಕೆ ವಾಪಾಸಾಗಿದ್ದು, ಅವರು ಭಾರತದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಸಾಧ್ಯತೆಗಳ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಡಿ.ಪಿ.ಸಿಂಗ್‌ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿದ್ದು, ಇದರಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ)ಅಧ್ಯಕ್ಷರು, ಐಐಟಿಗಳ ನಿರ್ದೇಶಕರು ಇದ್ದಾರೆ.ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳ, ಹೊಸ ಪಠ್ಯಕ್ರಮಗಳ ಸೇರ್ಪಡೆ, ವಿದೇಶಗಳಲ್ಲಿ ಇರುವ ಖ್ಯಾತ ಪ್ರಾಧ್ಯಾಪಕರಿಂದ ಆನ್‌ಲೈನ್‌ನಲ್ಲಿ ಶಿಕ್ಷಣ ಮುಂತಾದ ಸಾಧ್ಯತೆಗಳ ಬಗ್ಗೆ ಈ ಸಮಿತಿಯು ಪರಿಶೀಲನೆ ನಡೆಸಿ ವರದಿ ತಯಾರಿಸಲಿದೆ. 15 ದಿನದೊಳಗಾಗಿ ಈ ಸಮಿತಿಯು ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.

2019ರಲ್ಲಿ ಅಂದಾಜು 7.5 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಭಾರತದಿಂದ ವಿದೇಶಗಳಿಗೆ ತೆರಳಿದ್ದು, ಈ ಪೈಕಿ ಹಲವರು ಕೋವಿಡ್‌–19 ಪಿಡುಗು ವ್ಯಾಪಿಸಲು ಆರಂಭವಾದ ಬಳಿಕ ಭಾರತಕ್ಕೆ ವಾಪಾಸ್‌ ಆಗಿದ್ದಾರೆ. ‘ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂದಿದ್ದ ಹಲವರು ಇದೀಗ ಭಾರತದಲ್ಲೇ ಶಿಕ್ಷಣ ಮುಂದುವರಿಸಲು ನಿರ್ಧರಿಸಿದ್ದಾರೆ. ಭಾರತದಲ್ಲೇ ಉನ್ನತ ಶಿಕ್ಷಣ ಪೂರೈಸುವ ಉದ್ದೇಶದಿಂದ ಹಲವರು ವಾಪಾಸಾಗುತ್ತಿದ್ದಾರೆ. ಇವರ ಅಗತ್ಯತೆಗಳನ್ನು ಪೂರೈಸಲು ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗಿದೆ. ಈ ವಿದ್ಯಾರ್ಥಿಗಳು ಭಾರತದಲ್ಲೇ ವಿದ್ಯಾಭ್ಯಾಸ ಮಾಡುವಂತೆ ನಾವು ಎಲ್ಲ ರೀತಿಯ ಸೌಲಭ್ಯಗಳನ್ನು, ಅವಕಾಶಗಳನ್ನು ನೀಡಬೇಕಾಗಿದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್ ತಿಳಿಸಿದರು. ‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.