
ನವದೆಹಲಿ: ಕ್ಯಾಂಪಸ್‌ಗಳಲ್ಲಿ ತಾರತಮ್ಯ ನಿವಾರಣೆಗೆ ಸಂಬಂಧಿಸಿದಂತೆ, ಯುಜಿಸಿ ಅನುಷ್ಠಾನಗೊಳಿಸಿರುವ ನೂತನ ನಿಯಮಗಳನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ತುರ್ತು ವಿಚಾರಣೆ ನಡೆಸುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
‘ನೂತನ ನಿಯಮದಂತೆ ಸಮಿತಿಗಳು ರಚನೆ ಆದರೆ, ಸಾಮಾನ್ಯ ವರ್ಗದವರ ಮೇಲೆ ತಾರತಮ್ಯ ನಡೆಯುವ ಸಾಧ್ಯತೆ ಇದೆ’ ಎಂದು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
‘ಏನು ನಡೆಯುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ಲೋಪಗಳು ನಿವಾರಣೆ ಆಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ನಾವು ಹೇಳುತ್ತೇವೆ’ ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
ಮಾಯಾವತಿ ಸಮರ್ಥನೆ
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಇಕ್ವಿಟಿ (ನ್ಯಾಯಸಮ್ಮತ) ಕಮಿಟಿಗಳ’ ರಚನೆಯನ್ನು ಕಡ್ಡಾಯಗೊಳಿಸಿರುವ ಯುಜಿಸಿಯ ಹೊಸ ನಿಯಮಗಳನ್ನು ಬಹುಜನ ಸಮಾಜ ಪಕ್ಷದ ವರಿಷ್ಠರಾದ ಮಾಯಾವತಿ ಸಮರ್ಥಿಸಿಕೊಂಡಿದ್ದಾರೆ. ಸಾಮಾನ್ಯ ವರ್ಗದವರು ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸಮರ್ಥನೀಯ ಅಲ್ಲ ಎಂದಿದ್ದಾರೆ. ವ್ಯಾಪಕ ಸಮಾಲೋಚನೆಯ ಬಳಿಕವೇ ಈ ನಿಯಮಗಳನ್ನು ಜಾರಿಗೊಳಿಸಿ ಎಂದೂ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.