ಲಂಡನ್: ಆರ್ಥಿಕ ಬೆಳವಣಿಗೆ ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಪಾಸ್ತಾ, ಹಣ್ಣಿನ ರಸಗಳು ಮತ್ತು ಮಸಾಲೆ ಪದಾರ್ಥಗಳಿಂದ ಹಿಡಿದು ದೈನಂದಿನ ಅಗತ್ಯ ವಸ್ತುಗಳು ಸೇರಿ ಹಲವು ವಿದೇಶಿ ಉತ್ಪನ್ನಗಳ ಬೆಲೆಗಳನ್ನು ತಗ್ಗಿಸಲು ಆಮದು ಸುಂಕ ಕಡಿತಗೊಳಿಸುವುದಾಗಿ ಬ್ರಿಟನ್ ಭಾನುವಾರ ಪ್ರಕಟಿಸಿದೆ.
89 ಉತ್ಪನ್ನಗಳ ಮೇಲೆ ಸುಂಕವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುವುದು ಎಂದು ವ್ಯವಹಾರ ಮತ್ತು ವ್ಯಾಪಾರ ಇಲಾಖೆ (ಡಿಬಿಟಿ) ಹೇಳಿದೆ. ಇದರಿಂದ ಬ್ರಿಟನ್‌ನ ವ್ಯವಹಾರಗಳಿಗೆ ವಾರ್ಷಿಕ 1.7 ಕೋಟಿ ಪೌಂಡ್ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ ಸುಂಕ ವಿಧಿಸಿದ ಹಿನ್ನೆಲೆಯಲ್ಲಿ, 2027ರ ಜುಲೈವರೆಗೆ ಶೂನ್ಯ ಸುಂಕದಿಂದ ಪ್ರಯೋಜನ ಪಡೆಯಬಹುದಾದ ವ್ಯವಹಾರಗಳಿಗೆ ವೆಚ್ಚ ತಗ್ಗಿಸಲು ಮತ್ತು ಕೆಲವು ಅಗತ್ಯ ವಸ್ತುಗಳ ಆಮದು ಸುಂಕ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಡಿಬಿಟಿ ಹೇಳಿದೆ.
‘ಮುಕ್ತ ವ್ಯಾಪಾರವು ಆರ್ಥಿಕತೆಯನ್ನು ಬೆಳಸಲಿದೆ. ಬೆಲೆಗಳನ್ನು ತಗ್ಗಿಸಲಿದೆ. ಮಾರಾಟಕ್ಕೂ ನೆರವಾಗಲಿದೆ. ಅದಕ್ಕಾಗಿಯೇ ನಾವು ಹಲವು ಉತ್ಪನ್ನಗಳ ಮೇಲಿನ ಸುಂಕ ಕಡಿತಗೊಳಿಸುತ್ತಿದ್ದೇವೆ’ ಎಂದು ಬ್ರಿಟನ್ ವ್ಯಾಪಾರ ಮತ್ತು ವ್ಯವಹಾರ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಹೇಳಿದ್ದಾರೆ.
ಭಾರತ, ಗಲ್ಫ್ ಸಹಕಾರ ಮಂಡಳಿ, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜರ್ಲೆಂಡ್ ಸೇರಿದಂತೆ ಪಾಲುದಾರರೊಂದಿಗೆ ವ್ಯಾಪಾರ ಒಪ್ಪಂದಗಳ ಮಾತುಕತೆಗೆ ಬ್ರಿಟನ್ ಚುರುಕು ನೀಡಿದೆ. ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಮಾತುಕತೆಗೆ ಮತ್ತಷ್ಟು ವೇಗ ನೀಡುವ ಸಲುವಾಗಿಯೇ ಇತ್ತೀಚೆಗಷ್ಟೇ ಬ್ರಿಟನ್ ಚಾನ್ಸೆಲರ್ ರಾಚೆಲ್ ರೀವ್ಸ್ ಅವರು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ವ್ಯಾಪಕ ಮಾತುಕತೆ ಕೂಡ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.