ಲಂಡನ್ (ಪಿಟಿಐ): ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ 2020ರಲ್ಲಿ ವಿಧಿಸಿದ್ದ ಲಾಕ್‌ಡೌನ್‌ನ ಕಠಿಣ ನಿಯಮಗಳ ನಡುವೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಜನ್ಮದಿನದ ಕಾರ್ಯಕ್ರಮ ನಡೆಸಿದ್ದರ ಬಗ್ಗೆ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ. ಇದರಿಂದ ಜಾನ್ಸನ್ ಅವರು ಮಂಗಳವಾರ ಹೊಸ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಈ ಕುರಿತಂತೆ ಆಂತರಿಕವಾಗಿ ನಡೆಸಿರುವ ತನಿಖಾ ವರದಿಯು ಈ ವಾರದಲ್ಲಿ ಹೊರಬೀಳಲಿದೆ ಎನ್ನಲಾಗಿದ್ದು ನಿಯಮ ಉಲ್ಲಂಘನೆ ಕುರಿತು ಮೆಟ್ರೋಪಾಲಿಟನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಸ್ಕಾಟ್‌ಲೆಂಡ್ ಯಾರ್ಡ್ ದೃಢಪಡಿಸಿದೆ.
2020ರ ಜೂನ್ 19ರಂದು ಜಾನ್ಸನ್ ಅವರು ಕಾರ್ಯಕ್ರಮದಲ್ಲಿ 10 ನಿಮಿಷಗಳಿಗಿಂತ ಕಡಿಮೆ ಸಮಯ ಇದ್ದರು. ಎಲ್ಲರೂ ಶುಭಾಶಯ ಕೋರಿದ ನಂತರ ಅಲ್ಲಿಂದ ನಿರ್ಗಮಿಸಿದರು ಎಂದು ಡೌನಿಂಗ್ ಸ್ಟ್ರೀಟ್‌ನ ಪ್ರಧಾನಿ ಕಚೇರಿ ಹೇಳಿದೆ.
ಕೋವಿಡ್ ಹೆಚ್ಚಳದ ಹಿನ್ನೆಲೆ ಬ್ರಿಟನ್‌ನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಇಬ್ಬರಿಗಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿರ್ಬಂಧಿಸಲಾಗಿತ್ತು. ಕಾರ್ಯಕ್ರಮದಲ್ಲಿ 30 ಜನರು ಸೇರಿದ್ದರು. ಎಲ್ಲರೂ ಹುಟ್ಟುಹಬ್ಬದ ಗೀತೆ ಹಾಡಿದರು ಮತ್ತು ಕೇಕ್ ಸವಿದರು ಎಂದು ಐಟಿವಿ ನ್ಯೂಸ್ ವಾಹಿನಿ ಸೋಮವಾರ ರಾತ್ರಿ ವರದಿ ಮಾಡಿದೆ.
ಡೌನಿಂಗ್ ಸ್ಟ್ರೀಟ್‌ನ ಸಂಪುಟ ಕೊಠಡಿಯಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧಿಕೃತ ಪ್ರವಾಸದಿಂದ ಹಿಂತಿರುಗುವ ಬೋರಿಸ್ ಜಾನ್ಸನ್ ಅವರಿಗೆ ಸಂತಸವನ್ನುಂಟು ಮಾಡುವ ಉದ್ದೇಶದಿಂದ ಅವರ ಪತ್ನಿ ಕ್ಯಾರಿ ಸೈಮಂಡ್ಸ್ ಅವರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.