ಪ್ಯಾರಿಸ್: ‘ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್‌ಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಸಂಬಂಧ ಮುಂದಿನ ವಾರ ಹಮ್ಮಿಕೊಂಡಿದ್ದ ಉನ್ನತ ಮಟ್ಟದ ಸಮ್ಮೇಳನವನ್ನು ಮಧ್ಯಪ್ರಾಚ್ಯ ಬಿಕ್ಕಟ್ಟು ಹಿನ್ನಲೆಯಲ್ಲಿ ಮುಂದೂಡಲಾಗಿದೆ’ ಎಂದು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ.
ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಕಚೇರಿಯಲ್ಲಿ ಜೂನ್ 17ರಿಂದ 20ರವರೆಗೆ ಫ್ರಾನ್ಸ್ ಹಾಗೂ ಸೌದಿ ಅರೇಬಿಯಾ ಆಯೋಜಿಸಿದ್ದ ಸಮ್ಮೇಳನದಲ್ಲಿ ಮ್ಯಾಕ್ರನ್ ಸೇರಿದಂತೆ ಹಲವು ಗಣ್ಯ ನಾಯಕರು ಭಾಗಿಯಾಗಲಿದ್ದರು. ಈ ಸಮ್ಮೇಳನವು ದೀರ್ಘ ಕಾಲದಿಂದ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ನೆಲದಲ್ಲಿ ಶಾಂತಿ ಪುನರ್‌ಸ್ಥಾಪನೆಗೆ ನಾಂದಿ ಹಾಡಲಿದೆ ಎಂದು ಪ್ಯಾಲೆಸ್ಟೀನ್ ಸರ್ಕಾರ ಆಶಾಭಾವ ವ್ಯಕ್ತಪಡಿಸಿತ್ತು.
‘ಪ್ಯಾಲೆಸ್ಟೀನ್ ಅನ್ನು ದೇಶವನ್ನಾಗಿ ಗುರುತಿಸುವ ದೃಢನಿಶ್ಚಯ’ಪಡಿಸಲು ಈ ಸಮ್ಮೇಳನ ನೆರವಾಗಲಿದೆ ಎಂದು ಮ್ಯಾಕ್ರನ್ ಈ ಹಿಂದೆ ತಿಳಿಸಿದ್ದರು. ಇದಲ್ಲದೇ, ಇಸ್ರೇಲ್‌ಗೂ ಕೂಡ ಇದೇ ಮಾನ್ಯತೆ ನೀಡುವ ಕುರಿತು ಅವರು ಇಂಗಿತ ವ್ಯಕ್ತಪಡಿಸಿದ್ದರು.
ಇರಾನ್ ಮೇಲೆ ಇಸ್ರೇಲ್ ಶುಕ್ರವಾರ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಮ್ಯಾಕ್ರನ್, ‘ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಸೇರಿದಂತೆ ಮಿತ್ರಪಡೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಫ್ರಾನ್ಸ್ ಸೇನೆಯು ಸಿದ್ಧವಾಗಿದೆ. ಆದರೆ, ಇರಾನ್ ಮೇಲೆ ಯಾವುದೇ ದಾಳಿ ನಡೆಸುವ ಉದ್ದೇಶ ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.
‘ಭದ್ರತೆ ಕಾರಣದಿಂದ ಪ‍್ಯಾಲೆಸ್ಟೀನ್‌ನ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆಗೆ ಚರ್ಚಿಸಿ ಹೊಸ ದಿನಾಂಕ ಪ್ರಕಟಿಸಲಾಗುವುದು’ ಎಂದು ಎಮಾನ್ಯುಯೆಲ್ ಮ್ಯಾಕ್ರನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.