ಸಂಸತ್ ಭವನ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಇಲ್ಲದಿರುವುದು ದುರದೃಷ್ಟಕರ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಸಂಸದ ಮಿಯಾನ್ ಅಲ್ತಾಫ್ ಅಹ್ಮದ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗೂ ಮುನ್ನ ಕಣಿವೆಯ ಜನರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು ಎಂದಿದ್ದಾರೆ.
'ಜಮ್ಮು ಮತ್ತು ಕಾಶ್ಮೀರದಲ್ಲಿ 7 ವರ್ಷಗಳಿಂದ ಚುನಾಯಿತ ಸರ್ಕಾರ ಇಲ್ಲದೇ ಇರುವುದು ದುರದೃಷ್ಟಕರ. ಕಳೆದ 10 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆದಿಲ್ಲ. ನಾವು ಅಧಿಕಾರಿಗಳ ಅನುಕಂಪದಲ್ಲಿ ಬದುಕುತ್ತಿದ್ದೇವೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿವೃತ್ತ ನೌಕರರಿಗೆ ಪಿಂಚಿಣಿ ದೊರೆಯುತ್ತಿಲ್ಲ. ಗುತ್ತಿಗೆದಾರರಿಗೆ ಪಾವತಿಯಾಗಬೇಕಿದ್ದ ಬಿಲ್‌ಗಳು ಬಾಕಿ ಉಳಿದಿವೆ. ಶ್ರೀನಗರ ಮತ್ತು ದೆಹಲಿ ನಡುವಣ ವಿಮಾನ ಟಿಕೆಟ್ ದರ ಅತ್ಯಂತ ದುಬಾರಿಯಾಗಿದ್ದು, ತುರ್ತು ಸಂದರ್ಭಗಳಲ್ಲಿ ಪ್ರಯಾಣ ಮಾಡಲು ಕಣಿವೆಯ ಜನರಿಗೆ ಕಷ್ಟವಾಗುತ್ತಿದೆ ಎಂದು ಗಮನ ಸೆಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿರುವ ಎನ್‌ಸಿ ಸಂಸದ, ಜಮ್ಮು ಮತ್ತು ಕಾಶ್ಮೀರದಂತೆಯೇ, ಶೇರ್ ಇ–ಕಾಶ್ಮೀರ್ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸ್ವಾಯತ್ತತೆಯನ್ನೂ ಕಸಿದುಕೊಳ್ಳಲಾಗಿದೆ ಎಂದು ದೂರಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಹಿಂಪಡೆದು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳಾಗಿ ವಿಭಜಿಸಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.