ಸಿಬಿಐ
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಹೈಕೋರ್ಟ್, ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಲಂಚದ ಆರೋಪ ಎದುರಿಸುತ್ತಿರುವ ಮೂವರು ಸಿಬಿಐ ಅಧಿಕಾರಿಗಳನ್ನು ಎರಡು ದಿನಗಳ ಮಟ್ಟಿಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಏಪ್ರಿಲ್ 25 ರಂದು ನೀಡಿದ ಆದೇಶದಲ್ಲಿ, ‘ಇದು ಸಿಬಿಐ, ಇ.ಡಿ ಮತ್ತು ಇತರ ಇಲಾಖೆಗಳಲ್ಲಿನ ಅತಿರೇಕದ ಭ್ರಷ್ಟಾಚಾರದ ವಿಶಿಷ್ಟ ಪ್ರಕರಣಗಳಲ್ಲಿ ಒಂದಾಗಿದೆ. ಇದು ನಮ್ಮ ಕಾರ್ಯಾಂಗ ಮತ್ತು ತನಿಖಾ ಯಂತ್ರದ ಸಂಪೂರ್ಣ ವ್ಯವಸ್ಥೆಯನ್ನು ಅಲುಗಾಡಿಸುತ್ತದೆ. ಈ ಅಪರಾಧದ ತನಿಖೆ ನಡೆಯುವುದು ಪ್ರಾಥಮಿಕ ಕರ್ತವ್ಯವಾಗಿದೆ. ಅಲ್ಲದೆ ಅಪರಾಧಿಗಳನ್ನು ತಾವು ನಡೆಸಿದ ಭ್ರಷ್ಟಾಚಾರಕ್ಕೆ ಶಿಕ್ಷೆ ಎದುರಿಸುವಂತೆ ಮಾಡಬೇಕಿದೆ’ ಎಂದು ಹೇಳಿದ್ದಾರೆ.
ಮೂವರು ಆರೋಪಿ ಅಧಿಕಾರಿಗಳನ್ನು ಏಜೆನ್ಸಿ ಕಸ್ಟಡಿಗೆ ನೀಡಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶ ಹೊರಬಿದ್ದಿದೆ.
ತಾನು ಭಾಗಿಯಾಗಿರುವ ಎರಡು ಪ್ರಕರಣಗಳನ್ನು ಇತ್ಯರ್ಥಪಡಿಸಲು ಆರೋಪಿ ಸಿಬಿಐ ಅಧಿಕಾರಿಗಳು ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅದನ್ನು ₹35 ಲಕ್ಷಕ್ಕೆ ಇಳಿಸಿದರು ಎಂದು ದೂರುದಾರರು ಆರೋಪಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಕ್ಕಾಗಿ ಹಣಕಾಸು ಸಚಿವಾಲಯದ ಮತ್ತೊಬ್ಬ ಅಧಿಕಾರಿ ಗೂಗಲ್ ಪೇ ಮೂಲಕ ₹ 50,000 ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಏಪ್ರಿಲ್ 10 ರಂದು, ವಿಚಾರಣಾ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. 10 ದಿನಗಳ ಕಸ್ಟಡಿಗೆ ನೀಡುವಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ತಳ್ಳಿಹಾಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.