ADVERTISEMENT

ಉನ್ನಾವ್: ಬಿಜೆಪಿ ಶಾಸಕ ಅಮಾನತು

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:01 IST
Last Updated 30 ಜುಲೈ 2019, 20:01 IST

ನವದೆಹಲಿ: ಉನ್ನಾವ್ ಅತ್ಯಾಚಾರದ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಪಕ್ಷದಿಂದ ಈ ಹಿಂದೆಯೇ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಹೇಳಿದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಶಿಫಾರಸು ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣದ ಸ್ಥಿತಿಯಲ್ಲಿರುವ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಕುರಿತು ಮಂಗಳವಾರವೂ ಲೋಕಸಭೆಯಲ್ಲಿ ವಿರೋಧ ಪಕ್ಷಗಳು, ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು. ವಿರೋಧ ಪಕ್ಷಗಳಾದ ಕಾಂಗ್ರೆಸ್, ಬಿಎಸ್‌ಪಿ ಮತ್ತು ಎಸ್‌ಪಿ ಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದು, ಶಾಸಕ ಕುಲದೀಪ್ ಸಿಂಗ್‌ನನ್ನು ಪಕ್ಷದಿಂದ ದೂರವಿಡಬೇಕೆಂದೂ, ಬಿಜೆಪಿ ಯಾವುದೇ ಕಾರಣಕ್ಕೂ ಆರೋಪಿಯ ಪರ ವಹಿಸಬಾರದೆಂದು ಎಚ್ಚರಿಸಿದವು.

‘ಪ್ರಧಾನಿ ಮೋದಿಯವರೇ, ಮೊದಲು ಇಂಥ ಕ್ರಿಮಿನಲ್ ಶಾಸಕನನ್ನು ಪಕ್ಷದಿಂದ ಹೊರಗಿಡಿ. ಶಾಸಕನ ಸಹೋದರನಿಗೂ ನಿಮ್ಮ ಪಕ್ಷ ರಾಜಕೀಯ ಅಧಿಕಾರ ನೀಡಿದೆ. ಈಗಲೂ ತಡವಾಗಿಲ್ಲ. ಇನ್ನಾದರೂ ಕ್ರಮ ಕೈಗೊಳ್ಳಿ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್‌ನಲ್ಲಿ ಪ್ರಧಾನಿಗೆ ಒತ್ತಾಯಿಸಿದ್ದಾರೆ.

ADVERTISEMENT

ಈ ನಡುವೆ ಉನ್ನಾವ್ ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಹೊರಗಡೆ ಸಂತ್ರಸ್ತೆ ಸಂಬಂಧಿಕರು ಪ್ರತಿಭಟನೆ ನಡೆಸಿ, ಆಕೆಯ ಚಿಕ್ಕಪ್ಪ, ಮಹೇಶ್ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.