ADVERTISEMENT

ಕೇರಳ ಕಾಂಗ್ರೆಸ್‌ನಲ್ಲಿ ಭಿನ್ನಮತ: ಇಬ್ಬರು ನಾಯಕರ ಅಮಾನತು

ಡೆಕ್ಕನ್ ಹೆರಾಲ್ಡ್
Published 29 ಆಗಸ್ಟ್ 2021, 18:03 IST
Last Updated 29 ಆಗಸ್ಟ್ 2021, 18:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ನೇಮಕಾತಿ ಬಳಿಕ ಕೇರಳ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ಮುಖಂಡರಾದ ಉಮ್ಮನ್‌ ಚಾಂಡಿ ಮತ್ತು ರಮೇಶ್‌ ಚೆನ್ನಿತ್ತಲ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪಕ್ಷದ ನಾಯಕರ ಜೊತೆ ಸರಿಯಾದ ಚರ್ಚೆ ನಡೆಸದೇ ನೇಮಕಾತಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರಿಬ್ಬರು ಆರೋಪಿಸಿದ್ದಾರೆ.

ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ. ಸುಧಾಕರನ್‌ ಮತ್ತು ವಿಪಕ್ಷ ನಾಯಕ ವಿ.ಡಿ. ಸತೀಶನ್‌ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಜೊತೆಗೆ, ಕಳೆದ ಹಲವು ವರ್ಷಗಳಂತೆ ಈ ಬಾರಿ ಬಣ ನಿಷ್ಠೆ ಆಧರಿಸಿ ಆಯ್ಕೆ ಮಾಡಿಲ್ಲ ಎಂದು ಹೇಳಿದ್ದಾರೆ.

14 ಜಿಲ್ಲೆಗಳ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನು ರಾಷ್ಟ್ರ ಮಟ್ಟದ ನಾಯಕತ್ವ ಶನಿವಾರ ಘೋಷಣೆ ಮಾಡಿತ್ತು.

ADVERTISEMENT

ಈ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಸುಧಾಕರನ್‌ ಮತ್ತು ಸತೀಶನ್‌ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ್ದಾರೆ. ‘ಅಗತ್ಯವಿರುವಷ್ಟು ಮಾತುಕತೆ ನಡೆದಿವೆ. ಚಾಂಡಿ ಅವರು ನೀಡಿದ್ದ ಪಟ್ಟಿಯನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ಸುಧಾಕರನ್‌ ಹೇಳಿದರು. ಎರಡು ಬಣಗಳ ಮಧ್ಯೆಯೇ ಅಧ್ಯಕ್ಷ ಸ್ಥಾನಗಳು ಹಂಚಿಕೆ ಆಗಬೇಕು ಎಂದಿದ್ದರೆ ಕೆಪಿಸಿಸಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕರ ಅಗತ್ಯವೇನಿರುತ್ತದೆ ಎಂದು ಸತೀಶನ್‌ ಪ್ರಶ್ನಿಸಿದ್ದಾರೆ.

ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಮಹಿಳೆಯರನ್ನು ಪರಿಗಣಿಸಿಲ್ಲ ಎಂದು ಮಹಿಳಾ ನಾಯಕರೂ ಅತೃಪ್ತಿ ಹೊಂದಿದ್ದಾರೆ.

ಹಲವಾರು ವರ್ಷಗಳಿಂದ ಪಕ್ಷದ ಪದಾಧಿಕಾರಿಗಳು ಮತ್ತು ಅಭ್ಯರ್ಥಿಗಳನ್ನು ಬಣಗಳ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ. ಇದು ಪಕ್ಷವನ್ನು ಬಲಹೀನಗೊಳಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಪಕ್ಷ ಕಳಪೆ ಪ್ರದರ್ಶನ ನೀಡಲೂ ಇದೇ ಕಾರಣ ಎಂದು ಎನ್ನಲಾಗಿದೆ. ಹಾಗಾಗಿ ಪಕ್ಷದಲ್ಲಿ ಸಾಕಷ್ಟು ಬದಲಾಣೆಗಳನ್ನು ಮಾಡಲಾಗುತ್ತಿದೆ ಎನ್ನಲಾಗಿದೆ.

ಬಣ ರಾಜಕಾರಣ ಕೊನೆಗೊಳಿಸಬೇಕು ಎಂಬ ಕಾರಣಕ್ಕಾಗಿಯೇ ಸುಧಾಕರನ್‌ ಮತ್ತು ಸತೀಶನ್‌ ಅವರನ್ನು ಕ್ರಮವಾಗಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನಗಳಿಗೆ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಬಣ ರಾಜಕಾರಣವನ್ನು ಕೊನೆಗೊಳಿಸುವ ಹೊಣೆಯನ್ನು ಅವರಿಗೆ ವಹಿಸಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.