ADVERTISEMENT

ಯುಪಿ: ಸ್ವಾತಂತ್ರ್ಯ ದಿನೋತ್ಸವದ ಸಂದರ್ಭ ದಾಳಿಗೆ ಸಂಚು ರೂಪಿಸಿದ್ದ ಉಗ್ರ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2022, 4:17 IST
Last Updated 10 ಆಗಸ್ಟ್ 2022, 4:17 IST
   

ಲಖನೌ: ಸುಧಾರಿತ ಸ್ಪೋಟಕ ಬಳಸಿ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭ ದಾಳಿ ನಡೆಸಲು ಸಂಚು ರೂಪಿಸಿದ್ದ ಭಯೋತ್ಪಾದಕನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಐಸಿಸ್ ನಂಟು ಹೊಂದಿದ್ದ ಆತನನ್ನು ಅಜಂಗಡದ ಮುಬಾರಕ್‌ಪುರದಲ್ಲಿ ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ ಎಂದು ಎಎನ್‌ಐ ವರದಿ ಮಾಡಿದೆ,

ಅಧಿಕೃತ ಪ್ರಕಟಣೆಯ ಪ್ರಕಾರ, ಬಂಧಿತ ಉಗ್ರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸದಸ್ಯ ಸಬಾವುದ್ದೀನ್ ಅಜ್ಮಿ ಅಲಿಯಾಸ್ ದಿಲಾವರ್ ಖಾನ್ ಅಲಿಯಾಸ್ ಬೈರಾಮ್ ಖಾನ್ ಅಲಿಯಾಸ್ ಅಜರ್ ಎಂದು ಗುರುತಿಸಲಾಗಿದೆ. ಈತ ಅಜಂಗಡ ಜಿಲ್ಲೆಯ ಅಮಿಲೋ ಪ್ರದೇಶದ ನಿವಾಸಿ.

ಸುಬಾವುದ್ದೀನ್ ಜನರಿಗೆ ಆಮಿಷವೊಡ್ಡಿ ಐಸಿಸ್ ಸಂಘಟನೆಗೆ ಸೇರಿಕೊಳ್ಳುತ್ತಿದ್ದನು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಐಸಿಸ್ ಬಗ್ಗೆ ಪ್ರಚಾರ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ADVERTISEMENT

ಸಬಾವುದ್ದೀನ್ ವಿರುದ್ಧ ಲಖನೌದಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ), ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 121ಎ, 122, 123 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಅಜಂಗಡ ಜಿಲ್ಲೆಯ ಮುಬಾರಕ್‌ಪುರದ ವ್ಯಕ್ತಿಯೊಬ್ಬ ತನ್ನ ಸಹಚರರ ಮೂಲಕ ಐಸಿಸ್ ಸಿದ್ಧಾಂತದಿಂದ ಪ್ರಭಾವಿತನಾಗಿ ಜಿಹಾದಿ ಸಿದ್ಧಾಂತವನ್ನು ವಾಟ್ಸ್‌ಆ್ಯಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳ ಮೂಲಕ ಹರಡುತ್ತಿದ್ದ ಮತ್ತು ಇತರರನ್ನು ಭಯೋತ್ಪಾದಕ ಸಂಘಟನೆಗೆ ಸೇರುವಂತೆ ಉತ್ತೇಜಿಸುತ್ತಿದ್ದನು’ಎಂದು ನಮಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿಕೆ ತಿಳಿಸಿದೆ.

ಮೊಬೈಲ್ ಡೇಟಾವನ್ನು ಸ್ಕ್ಯಾನ್ ಮಾಡಿದ ನಂತರ ಆರೋಪಿಯನ್ನು ವಿಚಾರಣೆಗಾಗಿ ಲಖನೌದ ಎಟಿಎಸ್ ಪ್ರಧಾನ ಕಚೇರಿಗೆ ಕರೆತರಲಾಗಿದೆ. ಅಲ್ಲಿ, ಆತ ಮುಸ್ಲಿಂ ಯುವಕರನ್ನು ಭಯೋತ್ಪಾದನೆಗೆ ಸೇರುವಂತೆ ಪ್ರೇರೇಪಿಸಲು ಐಸಿಸ್ ರಚಿಸಿದ್ದ ಟೆಲಿಗ್ರಾಮ್ ಚಾನಲ್ ‘ಅಲ್-ಸಕ್ರ್ ಮೀಡಿಯಾ‘ ಗೆ ಸೇರಿಕೊಂಡಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

ವಿಚಾರಣೆಯ ಸಮಯದಲ್ಲಿ, ಸಬಾವುದ್ದೀನ್ 2018 ರಲ್ಲಿ ಬಿಲಾಲ್ ಎಂಬ ವ್ಯಕ್ತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಸಂಪರ್ಕಕ್ಕೆ ಬಂದಿರುವುದು ಬೆಳಕಿಗೆ ಬಂದಿದೆ. ಬಿಲಾಲ್, ಸಬಾವುದ್ದೀನ್‌ನೊಂದಿಗೆ ಜಿಹಾದ್ ಮತ್ತು ಕಾಶ್ಮೀರದಲ್ಲಿ ಮುಜಾಹಿದ್‌ಗಳ ಮೇಲಿನ ಕಾರ್ಯಾಚರಣೆಗಳ ಮಾತನಾಡುತ್ತಿದ್ದ. ಬಿಲಾಲ್ ಅವರು ಐಸಿಸ್ ಸದಸ್ಯರಾಗಿರುವ ಮೂಸಾ ಅಲಿಯಾಸ್ ಖತ್ತಾಬ್ ಕಾಶ್ಮೀರಿ ಅವರ ದೂರವಾಣಿ ಸಂಖ್ಯೆಯನ್ನು ನೀಡಿದ್ದರು, ನಂತರ ಅವರು ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.