ಅಮಾನತು
ಬಹ್ರೈಚ್ (ಉತ್ತರ ಪ್ರದೇಶ): ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಉತ್ತರ ಪ್ರದೇಶ ಬಹ್ರೈಚ್‌ನ ಇಬ್ಬರು ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಬಾರೈನ್‌ಬಾಗ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಮಾ ನಫೀಸ್ ಅವರು ಹಿರಿಯ ಅಧಿಕಾರಿಗಳ ಆದೇಶಗಳನ್ನು ಲೆಕ್ಕಿಸದೆ ಬಿಎಲ್‌ಒ ಕರ್ತವ್ಯಕ್ಕೆ ಹಾಜರಾಗದೆ, ಲಿಖಿತ ಮತ್ತು ದೂರವಾಣಿ ಸೂಚನೆಗಳನ್ನು ಪದೇ ಪದೇ ನಿರ್ಲಕ್ಷಿಸಿದ್ದಾರೆ ಎಂದು ಜಿಲ್ಲಾ ಪ್ರಾಥಮಿಕ ಶಿಕ್ಷಾ ಅಧಿಕಾರಿ (ಬಿಎಸ್ಎ) ಆಶಿಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಬಾಲ್ಹಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಲ್‌ಒ ಆಗಿ ನೇಮಕಗೊಂಡ ಸಹಾಯಕ ಶಿಕ್ಷಕ ಅನುರಾಗ್ ಎಸ್‌ಐಆರ್ ಕರ್ತವ್ಯಗಳನ್ನು ನಿರ್ವಹಿಸಲು ನಿರಾಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಬರಿಬ್ಬರ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚುನಾವಣಾ ಆಯೋಗವು, ಇಬ್ಬರೂ ಸೇವಾ ನಿಯಮಗಳ ಉಲ್ಲಂಘಿಸಿದ್ದಾರೆ ಎಂದು ಹೇಳಿದೆ. ಜಿಲ್ಲಾಧಿಕಾರಿ ಅಕ್ಷಯ್ ತ್ರಿಪಾಠಿ ಅವರ ನಿರ್ದೇಶನದ ಮೇರೆಗೆ, ಇಬ್ಬರೂ ಬಿಎಲ್‌ಒಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಬಿಎಸ್‌ಎ ತಿಳಿಸಿದ್ದಾರೆ.
ನವೆಂಬರ್ 4 ರಂದು ಉತ್ತರ ಪ್ರದೇಶದಲ್ಲಿ ಎಸ್‌ಐಆರ್ ಪ್ರಾರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.