ADVERTISEMENT

ಎಸ್‌ಪಿ ವಿರುದ್ಧ ಭ್ರಷ್ಟಾಚಾರ ಆರೋಪ: ಗುಂಡೇಟಿನಿಂದ ಗಾಯಗೊಂಡಿದ್ದ ಉದ್ಯಮಿ ಸಾವು

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 1:57 IST
Last Updated 14 ಸೆಪ್ಟೆಂಬರ್ 2020, 1:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾರದ ಹಿಂದೆ ದುಷ್ಕರ್ಮಿಗಳಿಂದ ಗುಂಡೇಟು ತಿಂದು ಗಂಭೀರವಾಗಿ ಗಾಯಗೊಂಡಿದ್ದ 44 ವರ್ಷದ ಉದ್ಯಮಿ ಭಾನುವಾರ ಕಾನ್ಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ದಾಳಿಗೂ ಮುಂಚೆ ಮಾಡಿದ್ದ ವಿಡಿಯೊದಲ್ಲಿ ಸಂತ್ರಸ್ತ ಇಂದ್ರ ಕಾಂತ್ ತ್ರಿಪಾಠಿ, ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸುವ ಬೆದರಿಕೆವೊಡ್ಡುತ್ತಿರುವುದಾಗಿ ಆರೋಪಿಸಿದ ಬಳಿಕ ಆಗಿನ ಮಹೋಬಾದ ಪೊಲೀಸ್ ವರಿಷ್ಠಾಧಿಕಾರಿ ಮಣಿ ಲಾಲ್ ಪಾಟಿದಾರ್ ಅವರನ್ನು ಅಮಾನತು ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ.

'ನನ್ನ ಸಹೋದರ ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ನಿಧನರಾದರು' ಎಂದು ಇಂದ್ರ ಕಾಂತ್ ಅವರ ಹಿರಿಯ ಸಹೋದರ ರವಿ ಕಾಂತ್ ತಿಳಿಸಿದ್ದಾರೆ.

ADVERTISEMENT

ಈಗಾಗಲೇ ಕೊಲೆ ಯತ್ನ ಮತ್ತು ಪಿತೂರಿ ಆರೋಪದಡಿ ದಾಖಲಿಸಿರುವ ಎಫ್‌ಐಆರ್‌ಗೆ ಕೊಲೆ ಆರೋಪವನ್ನು ಸೇರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೆಪ್ಟಂಬರ್ 8ರಂದು ಮಹೋಬಾದ ಬಾಂಡಾ-ಕಬ್ರೈ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಇಂದ್ರ ಕಾಂತ್ ಅವರಿಗೆ ದುಷ್ಕರ್ಮಿಗಳು ಕುತ್ತಿಗೆಗೆ ಗುಂಡು ಹಾರಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಅವರನ್ನು ಕಾನ್ಪುರಕ್ಕೆ ಕರೆದೊಯ್ಯಲಾಯಿತು. ಇಂದ್ರ ಕಾಂತ್ ಅವರು ಗಣಿಗಾರಿಕೆಗೆ ಸ್ಫೋಟಕಗಳನ್ನು ಪೂರೈಸುತ್ತಿದ್ದರು.

ಇದಾದ ಮೂರು ದಿನಗಳ ನಂತರ ಸೋದರ ರವಿ ಕಾಂತ್ ಅವರು ಪಾಟಿದಾರ್ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್‌ನಲ್ಲಿ ಕಬ್ರೈ ಪೊಲೀಸ್ ಠಾಣೆಯ ಅಮಾನತುಗೊಂಡ ಎಸ್‌ಎಚ್‌ಒ ದೇವೇಂದ್ರ ಶುಕ್ಲಾ, ಇಬ್ಬರು ಸ್ಥಳೀಯ ಉದ್ಯಮಿಗಳಾದ ಸುರೇಶ್ ಸೋನಿ ಮತ್ತು ಬ್ರಹ್ಮದತ್ ಅವರನ್ನು ಹೆಸರಿಸಲಾಗಿತ್ತು.

ಪಾಟೀದಾರ್ ತನ್ನ ಸಹೋದರನಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ರವಿ ಕಾಂತ್ ಆರೋಪಿಸಿದ್ದು, ಅವರು ಹಣ ನೀಡಲು ನಿರಾಕರಿಸಿದಾಗ ಆರೋಪಿಗಳು ಬೆದರಿಕೆ ಹಾಕಲು ಪ್ರಾರಂಭಿಸಿದರು ಎಂದಿದ್ದಾರೆ. ಈ ಕುರಿತಾದ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಮರುದಿನ ಪತ್ರಿಕಾಗೋಷ್ಠಿ ನಡೆಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ ಕೆಲವೇ ಗಂಟೆಗಳ ನಂತರ ತನ್ನ ಸಹೋದರನ ಮೇಲೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.