ಗೊಂಡ(ಉತ್ತರ ಪ್ರದೇಶ): ಭೂವ್ಯಾಜ್ಯಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನ್ಯಾಯಾಲಯವು ಕೇಂದ್ರದ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಅಪೇಕ್ಷಾ ಸಿಂಗ್ ಈ ಆದೇಶ ನೀಡಿದ್ದು, ಸಚಿವ ಕೀರ್ತಿ ವರ್ಧನ್ ಸಿಂಗ್, ಸಹಚರರಾದ ರಾಜೇಶ್ ಸಿಂಗ್, ಪಿಂಕು ಸಿಂಗ್ ಮತ್ತು ಸಹದೇವ್ ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಲು ಮಂಕಾಪುರ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿದೆ.
ಮಂಕಾಪುರ ಪ್ರದೇಶದ ಭಿತೌರಾ ನಿವಾಸಿ ಅಜಯ್ ಸಿಂಗ್ ಎಂಬ ದೂರುದಾರರು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ರ ಸೆಕ್ಷನ್ 173(4) ರ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ತಮ್ಮ ಪತ್ನಿ ಮನಿಷಾ ಸಿಂಗ್ ಹೆಸರಿನಲ್ಲಿ ನೋಂದಾಯಿಸಲಾಗಿದ್ದ ಭೂಮಿಯನ್ನು ಮೂಲ ಮಾರಾಟಗಾರರಾದ ಬಿಟ್ಟನ್ ದೇವಿ ಅವರ ಮೇಲೆ ಪ್ರಭಾವ ಬೀರಿ, ಮೂರು ವರ್ಷದ ಹಳೆಯ ಸ್ಟಾಂಪ್ ಪೇಪರ್ ಬಳಸಿ ಮಿಥಲೇಶ್ ರಸ್ತೋಗಿ ಮತ್ತು ಕಾಂತಿ ಸಿಂಗ್ ಅವರ ಹೆಸರಿಗೆ ವರ್ಗಾಯಿಸುವ ಮೂಲಕ ವಂಚಿಸಲಾಗಿದೆ ಎಂದು ಅಜಯ್ ಸಿಂಗ್ ಆರೋಪಿಸಿದ್ದಾರೆ.
ದೂರು ನೀಡಿದಾಗ, ಪೊಲೀಸ್ ವರಿಷ್ಠಾಧಿಕಾರಿ ತನಿಖೆಗೆ ಆದೇಶಿಸಿದ್ದರು. ಅದರಲ್ಲಿ ಆರೋಪ ದೃಢಪಟ್ಟಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಎಸ್ಪಿ ನಿರ್ದೇಶನದ ಆಧಾರದ ಮೇಲೆ, ಪೊಲೀಸರು 2024ರಲ್ಲಿ ಮಾರಾಟಗಾರ ಮತ್ತು ಖರೀದಿದಾರರ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ನಂತರ ಪ್ರಕರಣ ಮುಕ್ತಾಯಗೊಳಿಸಿ ಅಂತಿಮ ವರದಿ ಸಲ್ಲಿಸಿದ್ದರು ಎಂದು ಹೇಳಿದ್ದಾರೆ.
ಪ್ರಕರಣ ಅಂತ್ಯಗೊಳಿಸುವ ಪೊಲೀಸರ ವರದಿ ವಿರುದ್ಧ ಅಜಯ್ ಸಿಂಗ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದು, ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಕೋರ್ಟ್ ಹೆಚ್ಚಿನ ತನಿಖೆಗೆ ಆದೇಶಿಸಿತ್ತು.
ಬಳಿಕ, ಅಜಯ್ ಸಿಂಗ್ ದಂಪತಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ ರಾಜೇಶ್ ಸಿಂಗ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.