ಮೀರತ್ (ಉತ್ತರ ಪ್ರದೇಶ): ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಥಳಿಸಿದ ಗುಂಪೊಂದು, ಜೈಶ್ರೀರಾಮ್ ಜಪಿಸುವಂತೆ ಒತ್ತಾಯಿಸಿದೆ ಎಂದು ಆತನ ಕುಟುಂಬವು ಆರೋಪಿಸಿದೆ.
ಪಲ್ಲವ್‌ಪುರಂನ ಸೋಫಿಪುರದ ನಿವಾಸಿ ಗುಲ್ಫಾಮ್ ಅವರು ಮಂಗಲ್ ಪಾಂಡೆ ನಗರದಲ್ಲಿರುವ ಖಾಸಗಿ ಶೂಟಿಂಗ್ ರೇಂಜ್‌ನಲ್ಲಿ ತಾಲೀಮು ನಡೆಸಿ, ಶನಿವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಆತನ ತಂದೆ ಅಫ್ತಾಬ್ ಹೇಳಿದ್ದಾರೆ.
‘ಮೂವರು ಯುವಕರು ತಮ್ಮ ಪುತ್ರನನ್ನು ವಿಕ್ಟೋರಿಯಾ ಪಾರ್ಕ್‌ಗೆ ಬೈಕ್‌ನಲ್ಲಿ ಕರೆದೊಯ್ದು, ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಮೊಬೈಲ್ ಫೋನ್ ಕಸಿದುಕೊಂಡು ಜೈಶ್ರೀರಾಮ್ ಜಪಿಸುವಂತೆ ಒತ್ತಾಯಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಗುಲ್ಫಾಮ್‌ನನ್ನು ಬೆತ್ತಲೆಗೊಳಿಸಿ ಥಳಿಸಿದ ನಂತರ, ಆತ ಪ್ರಜ್ಞಾಹೀನನಾಗಿ ಅಲ್ಲಿಯೇ ಬಿದ್ದಿದ್ದ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ’ ಎಂದು ಸಂತ್ರಸ್ತನ ಕುಟುಂಬಸ್ಥರು ತಿಳಿಸಿದ್ದಾರೆ.
‘ಜೈಶ್ರೀರಾಮ್ ಜಪಿಸುವಂತೆ ಸಂತ್ರಸ್ತನಿಗೆ ಒತ್ತಾಯಿಸಲಾಗಿದೆ ಎಂಬ ಉಲ್ಲೇಖ ಎಫ್‌ಐಆರ್‌ನಲ್ಲಿ ಇಲ್ಲ. ಮೇಲ್ನೋಟಕ್ಕೆ ಇದು ಯುವಕರ ನಡುವಿನ ದ್ವೇಷದ ಪ್ರಕರಣ ಎನ್ನುವುದು ಕಂಡು ಬಂದಿದೆ’ ಎಂದು ಠಾಣಾಧಿಕಾರಿ ಮಹಾವೀರ್ ಸಿಂಗ್ ತಿಳಿಸಿದ್ದಾರೆ.
ಅಫ್ತಾಬ್ ನೀಡಿರುವ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸುವ ಯತ್ನ ನಡೆದಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.