ADVERTISEMENT

ಉತ್ತರ ಪ್ರದೇಶದಲ್ಲಿ ದೇವರ ಆಧಾರ್ ಕಾರ್ಡ್ ಕೇಳಿದ ಅಧಿಕಾರಿ

ದೇವಾಲಯದ ಜಮೀನಿನಲ್ಲಿ ಬೆಳೆದ ಬೆಳೆ ಮಾರಾಟ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 14:57 IST
Last Updated 7 ಜೂನ್ 2021, 14:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ದೇವಾನುದೇವತೆಗಳು ಆಧಾರ್ ಕಾರ್ಡ್ ಪಡೆಯಲು ಹೇಗೆ ಸಾಧ್ಯ?

–ಈ ಪ್ರಶ್ನೆ ಎದುರಾಗಿದ್ದು ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ದೇವಾಲಯವೊಂದರ ಅರ್ಚಕ ಮತ್ತು ಅದರ ನಿರ್ವಹಣೆಯ ಜವಾಬ್ದಾರಿ ಹೊತ್ತವರಿಗೆ.

ಬಾಂದಾ ಜಿಲ್ಲೆಯಲ್ಲಿ ದೇವಾಲಯವೊಂದಕ್ಕೆ ಸೇರಿದ ಜಮೀನಿನಲ್ಲಿ ಬೆಳೆದ ಫಸಲನ್ನು ಮಾರಾಟ ಮಾಡಲೆಂದು ಅರ್ಚಕ ಹಾಗೂ ದೇವಾಲಯದ ಉಸ್ತುವಾರಿ ಹೊತ್ತವರು ಅಲ್ಲಿನ ಕೃಷಿ ಮಾರುಕಟ್ಟೆಗೆ ತೆರಳಿದ್ದರು. ಆಗ ಅಲ್ಲಿನ ಅಧಿಕಾರಿಯೊಬ್ಬರು ‘ಫಸಲನ್ನು ಮಾರಾಟ ಮಾಡಬೇಕೆಂದರೆ ದೇವರ ಆಧಾರ್ ಕಾರ್ಡ್ ತನ್ನಿ’ ಎಂದು ಹೇಳಿದ್ದಾರೆ.

ADVERTISEMENT

ಮೂಲಗಳ ಪ್ರಕಾರ ಬೆಳೆಗಳನ್ನು ಮಾರಾಟ ಮಾಡುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ದಾಖಲೆ ತೋರಿಸುವಂತೆ ಬಾಂದಾ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಈಚೆಗಷ್ಟೇ ನಿರ್ದೇಶನ ನೀಡಿದ್ದಾರೆ.

‘ಇದು ಮನುಷ್ಯ ಅಥವಾ ದೇವರ ಪ್ರಶ್ನೆಯಲ್ಲ. ನೀವು ಬೆಳೆದ ಬೆಳೆಯನ್ನು ಮಾರಾಟ ಮಾಡಬೇಕೆಂದರೆ ಆಧಾರ್ ಕಾರ್ಡ್ ತಂದು ತೋರಿಸಬೇಕಷ್ಟೇ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ದೇವಾಲಯದ ಜಮೀನು ದೇವರ ಹೆಸರಿನಲ್ಲೇ ನೋಂದಣಿಯಾಗಿರುವ ಕಾರಣ, ಆಧಾರ್ ಕಾರ್ಡ್‌ ಇಲ್ಲದೇ ಯಾವುದೇ ಬೆಳೆಯನ್ನು ಮಾರಲು ಆಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಬಹುತೇಕ ದೇವಾಲಯಗಳ ಅರ್ಚಕರಿಗೆ ಈ ಸ್ಥಿತಿ ಎದುರಾಗಿದೆ ಎನ್ನುತ್ತವೆ ಮೂಲಗಳು.

‘ಬೆಳೆಗಳನ್ನು ಮಾರಾಟ ಮಾಡದಿದ್ದರೆ ದೇವಾಲಯದ ನಿರ್ವಹಣೆ ಮಾಡುವುದಾದರೂ ಹೇಗೆ? ದೇವರ ಆಧಾರ್ ಕಾರ್ಡ್ ಅನ್ನು ನಾವು ಎಲ್ಲಿಂದ ತರಬೇಕು’ ಎಂದು ಪ್ರಶ್ನಿಸುತ್ತಾರೆ ದೇವಾಲಯದ ನಿರ್ವಹಣೆಯ ಹೊಣೆ ಹೊತ್ತವರು.

ಕೆಲ ದಿನಗಳ ಹಿಂದೆ ಲಖನೌ ಜಿಲ್ಲೆಯಲ್ಲೂ ಇಂಥದ್ದೇ ಸಂದರ್ಭ ಎದುರಾದಾಗ ದೇವರ ಹೆಸರಿನಲ್ಲಿದ್ದ ಜಮೀನನ್ನು ವ್ಯಕ್ತಿಯೊಬ್ಬರ ಹೆಸರಿಗೆ ವರ್ಗಾಯಿಸಲಾಯಿತು. ನಂತರ ಆ ವ್ಯಕ್ತಿ ನಾನು ‘ದೇವರ ಉತ್ತರಾಧಿಕಾರಿ’ ಎಂದು ಹೇಳಿಕೊಂಡನಂತೆ.

ದೇವರು ಸತ್ತಿದ್ದಾನೆ!: ಲಖನೌ ಜಿಲ್ಲೆಯ ಮೋಹನ್‌ಲಾಲ್ ಗಂಜ್ ಪಟ್ಟಣದ ರೆವೆನ್ಯೂ ದಾಖಲೆಗಳಲ್ಲಿ ಕೆಲವರು ‘ದೇವರು ಸತ್ತಿದ್ದಾರೆ’ ಎಂದು ತೋರಿಸಿ, ತಾವು ದೇವರ ಉತ್ತರಾಧಿಕಾರಿ ಎಂದು ದೇವರ ಹೆಸರಿನ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.