ADVERTISEMENT

ನಟಿಯನ್ನು ಅಭ್ಯರ್ಥಿಯಾಗಿಸಿದ್ದಕ್ಕೇನು ತೊಂದರೆ: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ಪಿಟಿಐ
Published 15 ಜನವರಿ 2022, 15:24 IST
Last Updated 15 ಜನವರಿ 2022, 15:24 IST
ಅರ್ಚನಾ ಗೌತಮ್
ಅರ್ಚನಾ ಗೌತಮ್   

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಟಿ ಹಾಗೂ ಮಾಡೆಲ್ ಅರ್ಚನಾ ಗೌತಮ್ ಅವರನ್ನು ಹಸ್ತಿನಾಪುರ ಕ್ಷೇತ್ರದಿಂದ ಕಾಂಗ್ರೆಸ್‌ ಕಣಕ್ಕಿಳಿಸಿದೆ. ಕಾಂಗ್ರೆಸ್‌ನ ಈ ನಿರ್ಧಾರವನ್ನು ಅಗ್ಗದ ಪ್ರಚಾರವೆಂದು ಬಿಜೆಪಿ ಟೀಕಿಸಿದೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಪಕ್ಷವು, ‘ಒಬ್ಬ ಕಲಾವಿದೆಗೆ ರಾಜಕೀಯ ಕ್ಷೇತ್ರಕ್ಕೆ ಬರಲು ಅವಕಾಶ ಕಲ್ಪಿಸಿದ್ದೇವೆ‘ ಎಂದು ಸಮರ್ಥಿಸಿಕೊಂಡಿದೆ.

‘ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಗೆ ಬರ ಬಂದಿದೆ. ಅವರು ಅಗ್ಗದ ಪ್ರಚಾರ ಪಡೆಯಲು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿದ್ದಾರೆ. ಅವರಿಗೆ ಚುನಾವಣೆ ಬಗ್ಗೆ ಯಾವುದೇ ಗಂಭೀರತೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂದು ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಹೇಳಿದ್ದಾರೆ.

ADVERTISEMENT

ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ಹಸ್ತಿನಾಪುರದ ಕಾಂಗ್ರೆಸ್ ಅಭ್ಯರ್ಥಿ ಅರ್ಚನಾ ಗೌತಮ್ ಅವರ ಬಿಕಿನಿ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಮೇಲೆ ಈ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ಬಿಜೆಪಿ ಅವಹೇಳನಕ್ಕೆ ತಿರುಗೇಟು ನೀಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್, ‘ಕಲಾವಿದರು ರಾಜಕೀಯಕ್ಕೆ ಬರುವುದು ಬಿಜೆಪಿಗೆ ಇಷ್ಟವಿಲ್ಲವೇ? ಅವರ ಪಕ್ಷದಲ್ಲಿ ಕಲಾವಿದರು ರಾಜಕೀಯಕ್ಕೆ ಬಂದಿಲ್ಲವೇ? ಮಂತ್ರಿಗಳು ಆಗಿಲ್ಲವೇ? ಒಬ್ಬ ಕಲಾವಿದ ರಾಜಕೀಯಕ್ಕೆ ಬಂದು ಜನಸೇವೆ ಮಾಡಬೇಕೆನ್ನುವುದು ಒಳ್ಳೆಯ ಸಂಕೇತ’ ಎಂದು ಹೇಳಿದ್ದಾರೆ.

‘ಬಿಜೆಪಿ ಅರ್ಚನಾ ಗೌತಮ್ ಬಗ್ಗೆ ನೀಡಿರುವ ಅಭಿಪ್ರಾಯಗಳು ಅವರ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತವೆ’ ಎಂದು ಅಶೋಕ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಅಖಿಲ ಭಾರತ್ ಹಿಂದೂ ಮಹಾಸಭಾ ಮುಖಂಡ ಸ್ವಾಮಿ ಚಕ್ರಪಾಣಿ ಅವರು, ‘ಮಾನಸಿಕವಾಗಿ ದಿವಾಳಿಯಾಗಿರುವ ಪಕ್ಷದಿಂದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ’ ಎಂದಿದ್ದಾರೆ.

ಯಾವುದೇ ವ್ಯಕ್ತಿ ಸಾಮಾಜಿಕ ಜೀವನಕ್ಕೆ ಪ್ರವೇಶ ಮಾಡುವುದಿದ್ದರೇ ಅಂತಹವರು ನಮ್ಮ ಸಂಸ್ಕೃತಿಯನ್ನು ಗೌರವಿಸುವಂತಿರಬೇಕು. ಮತ ಗಳಿಸಲು ಕಾಂಗ್ರೆಸ್‌ನವರು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎಂದು ಚಕ್ರಪಾಣಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.