ADVERTISEMENT

ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ: ಕನಿಷ್ಠ ಅಂತರ 203 ಮತ!

49 ಮಂದಿಗೆ ಅಲ್ಪ ಅಂತರದ ಗೆಲುವು

ಪಿಟಿಐ
Published 12 ಮಾರ್ಚ್ 2022, 19:50 IST
Last Updated 12 ಮಾರ್ಚ್ 2022, 19:50 IST
ಉತ್ತರ ಪ್ರದೇಶದ ಮಥುರಾ ಕ್ಷೇತ್ರದಲ್ಲಿ ಭಾರಿ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಶರ್ಮಾ ಅವರು ಬೆಂಬಲಿಗರ ಜೊತೆ ಸಂಭ್ರಮಿಸಿದ ಕ್ಷಣ–ಪಿಟಿಐ ಚಿತ್ರ
ಉತ್ತರ ಪ್ರದೇಶದ ಮಥುರಾ ಕ್ಷೇತ್ರದಲ್ಲಿ ಭಾರಿ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಶರ್ಮಾ ಅವರು ಬೆಂಬಲಿಗರ ಜೊತೆ ಸಂಭ್ರಮಿಸಿದ ಕ್ಷಣ–ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ 49 ಅಭ್ಯರ್ಥಿಗಳ ಗೆಲುವಿನ ಅಂತರ 5,000 ಮತಗಳಿಗಿಂತ ಕಡಿಮೆಯಿದೆ. ಸಮಾಜವಾದಿ ಪಕ್ಷದ 25 ಅಭ್ಯರ್ಥಿಗಳು, ಬಿಜೆಪಿಯ 18 ಅಭ್ಯರ್ಥಿಗಳು,ಆರ್‌ಎಲ್‌ಡಿ ಪಕ್ಷದ ಮೂರು ಅಭ್ಯರ್ಥಿಗಳು ಐದು ಸಾವಿರ ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋಲುಂಡಿದ್ದಾರೆ.ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ನಿಷಾದ್ ಪಕ್ಷದ ಇಬ್ಬರು ಹಾಗೂ ಅಪ್ನಾದಳದ (ಸೋನೆಲಾಲ್‌) ಒಬ್ಬ ಅಭ್ಯರ್ಥಿ ಅಲ್ಪ ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ.

ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಗೆದ್ದವರೂ ಇದ್ದಾರೆ. ಧಾಮ್‌ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಕುಮಾರ್ ರಾಣಾ ಅವರು ಎಸ್‌ಪಿಯ ನಯೀಮ್–ಉಲ್–ಹಸನ್ ಅವರನ್ನು ಕೇವಲ 203 ಮತಗಳಿಂದ ಸೋಲಿಸಿದ್ದಾರೆ. ಹಾಗೆಯೇ ಕುರ್ಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಕೇಂದ್ರ ವರ್ಮಾ ಅವರು ಎಸ್‌ಪಿಯ ರಾಕೇಶ್ ವರ್ಮಾ ಅವರನ್ನು 217 ಮತಗಳಿಂದ ಸೋಲಿಸಿದ್ದಾರೆ.

ಅಲಿಗಂಜ್, ಔರಾಯಿ, ಬಹರಾಯಿಚ್‌, ಛಿಬರಮವೂ, ಫರೀದ್‌ಪುರ, ಜಲಾಲಾಬಾದ್, ಬಿಂದಕಿ, ಜಲೇಸರ್, ಕಟರಾ, ಮಧುಬನ್, ಮಾಣಿಕ್‌ಪುರ, ಮಡಿಯಾಹೂ, ಮೊಹಮ್ಮದಿ, ಮೊರಾದಾಬಾದ್ ನಗರ, ನಕುಡ್, ಫೂಲ್‌ಪುರ, ಸಲೋನ್, ಶಾಹ್‌ಗಂಜ್, ಶ್ರಾವಸ್ತಿ, ಸೀತಾಪುರ, ಸುಲ್ತಾನ್‌ಪುರ ಮತ್ತು ತಿರ್ವಾ ಕ್ಷೇತ್ರದ ಎಸ್‌ಪಿ ಅಭ್ಯರ್ಥಿಗಳು ಐದು ಸಾವಿರಕ್ಕಿಂತ ಕಡಿಮೆ ಮತಗಳಿಂದ ಪರಾಭವಗೊಂಡಿದ್ದಾರೆ. ಈ ಪೈಕಿ ಆರು ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿನ ಅಂತರ 1,000 ಮತಗಳಿಂಗಿಂತ ಕಡಿಮೆಯಿದೆ.

ADVERTISEMENT

ಬಡೌತ್, ನಹತೂರ್ ಹಾಗೂ ಬಿಜ್ನೂರ್‌ನಲ್ಲಿ ಆರ್‌ಎಲ್‌ಡಿ ಅಭ್ಯರ್ಥಿಗಳು ಕ್ರಮವಾಗಿ 315, 258 ಹಾಗೂ 1,445 ಮತಗಳಿಂದ ಸೋತಿದ್ದಾರೆ.

ಚಾಂದ್‌ಪುರದಲ್ಲಿ ಬಿಜೆಪಿಯ ಕಮಲೇಶ್ ವಿರುದ್ಧ ಎಸ್‌ಪಿಯ ಸ್ವಾಮಿ ಓಂವೇಶ್ ಅವರು 234 ಮತಗಳ ಅಲ್ಪ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿಯು ರಾಮ್‌ನಗರ ಕ್ಷೇತ್ರವನ್ನು 261 ಮತಗಳಿಂದ ಹಾಗೂ ಇಸೌಲಿ ಕ್ಷೇತ್ರವನ್ನು 269 ಮತಗಳಿಂದ ಕಳೆದುಕೊಂಡಿದೆ.

ಬಸ್ತಿ, ಸಾದರ್, ಭದೊಹಿ, ಬಿಸೌಲಿ, ದಿಬಿಯಾಪುರ, ದುಮರಿಯಾಗಂಜ್‌, ಗಾಜಿಪುರ, ಇಟಾವಾ, ಜಸ್ರಾನಾ, ಕಿಠೋರ್, ಮೆಜಾ, ಪಟಿಯಾಲಿ, ಫರೆಂದ, ರಾಣಿಗಂಜ್, ಸರೇನಿ ಹಾಗೂ ಝೈದಾಪುರದಲ್ಲಿ ಬಿಜೆಪಿ ಅಭ್ಯರ್ಥಿಗಳು ಐದು ಸಾವಿರಕ್ಕಿಂತ ಕಡಿಮೆ ಮತಗಳಿಂದ ಸೋತಿದ್ದಾರೆ. ಈ ಪೈಕಿ ಆರು ಕ್ಷೇತ್ರಗಳಲ್ಲಿ ಸೋಲಿನ ಅಂತರ 1,000ಕ್ಕಿಂತ ಕಡಿಮೆಯಿದೆ.

ಹಾಡಿಯಾ ಹಾಗೂ ಕಲ್ಪಿ ಕ್ಷೇತ್ರಗಳನ್ನು ನಿಷಾದ್ ಪಕ್ಷವು ಕ್ರಮವಾಗಿ 3,543 ಮತ್ತು 2,816 ಮತಗಳಿಂದ ಕಳೆದುಕೊಂಡಿದೆ. ಬಛರಾಂವ್‌ನಲ್ಲಿ ಅಪ್ನಾದಳದ (ಎಸ್‌) ಅಭ್ಯರ್ಥಿಯನ್ನು 2,812 ಮತಗಳಿಂದ ಎಸ್‌ಪಿ ಅಭ್ಯರ್ಥಿ ಸೋಲಿಸಿದ್ದಾರೆ.

403 ಸದಸ್ಯಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 255, ಮಿತ್ರಪಕ್ಷಗಳಾದ ಅಪ್ನಾದಳ (ಎಸ್‌) 12, ನಿಷಾದ್‌ ಪಕ್ಷ 6 ಕ್ಷೇತ್ರಗಳಲ್ಲಿ ಗೆದ್ದಿವೆ. ಸಮಾಜವಾದಿ ಪಕ್ಷವು 111, ಮಿತ್ರಪಕ್ಷ ಆರ್‌ಎಲ್‌ಡಿ 8 ಕ್ಷೇತ್ರಗಳಲ್ಲಿ ಗೆದ್ದಿವೆ. ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷವು ಆರು ಕಡೆ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಹಾಗೂ ಜನಸತ್ತಾ ದಳ ಲೋಕತಾಂತ್ರಿಕ ಪಕ್ಷಗಳು ತಲಾ ಎರಡು, ಮಾಯಾವತಿ ಅವರ ಬಿಎಸ್‌ಪಿ ಒಂದು ಕ್ಷೇತ್ರಗಳಲ್ಲಿ ಗೆದ್ದಿವೆ.

ಅತಿಹೆಚ್ಚು ಅಂತರದ ದಾಖಲೆ

ಬಿಜಿಪಿಯ ಐವರು ಅಭ್ಯರ್ಥಿಗಳು ಅತಿಹೆಚ್ಚು ಮತಗಳಿಂದ ಗೆದ್ದು ದಾಖಲೆ ಬರೆದಿದ್ದಾರೆ. ಸಾಹಿಬಾಬಾದ್‌ನಲ್ಲಿ ಸುನಿಲ್ ಶರ್ಮಾ ಅವರು 2.14 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ನೊಯ್ಡಾದಲ್ಲಿ ಪಂಕಜ್ ಸಿಂಗ್ ಅವರು 1.81 ಲಕ್ಷ ಮತಗಳ ಅಂತರದಿಂದ ಜಯಿಸಿದ್ದಾರೆ. ಮೀರಠ್‌ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಅಮಿತ್ ಅಗರ್‌ವಾಲ್ ಅವರು 1.18 ಲಕ್ಷ ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿಯನ್ನು ಸೋಲಿಸಿದ್ದಾರೆ.ಪುರುಷೋತ್ತಮ ಖಂಡೇಲ್‌ವಾಲಾ ಅವರು ಆಗ್ರಾ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 1.12 ಲಕ್ಷ ಮತಗಳ ಅಂತರದಿಂದ ಹಾಗೂ ಶ್ರೀಕಾಂತ್ ಶರ್ಮಾ ಅವರು ಮಥುರಾ ಕ್ಷೇತ್ರದಲ್ಲಿ 1.09 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.