ADVERTISEMENT

ಯುಪಿ: ಒತ್ತುವರಿ ಆರೋಪ; 185 ವರ್ಷ ಹಳೆಯ ಮಸೀದಿಯ ಪಾರ್ಶ್ವ ಕೆಡವಿದ ಅಧಿಕಾರಿಗಳು

ಪಿಟಿಐ
Published 10 ಡಿಸೆಂಬರ್ 2024, 11:31 IST
Last Updated 10 ಡಿಸೆಂಬರ್ 2024, 11:31 IST
   

ಫತೇಪುರ(ಉತ್ತರ ಪ್ರದೇಶ): ಅಕ್ರಮ ನಿರ್ಮಾಣ ಮತ್ತು ಹೆದ್ದಾರಿ ವಿಸ್ತರಣೆಗೆ ತಡೆಯಾಗಿದೆ ಎಂಬ ಕಾರಣ ನೀಡಿ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ 185 ವರ್ಷ ಹಳೆಯದಾದ ನೂರಿ ಮಸೀದಿಯ ಒಂದು ಭಾಗವನ್ನು ಕೆಡವಲಾಗಿದೆ.

ಭಾರಿ ಭದ್ರತೆಯಲ್ಲಿ ಸ್ಥಳೀಯ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

1839ರಲ್ಲಿ ಲಲೌಲಿ ಪಟ್ಟಣದಲ್ಲಿ ನೂರಿ ಮಸೀದಿ ನಿರ್ಮಾಣ ಆಗಿದೆ. ಅದರ ಸುತ್ತ 1956ರಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಸಂಬಂಧ ಅಲಹಾಬಾದ್ ಹೈಕೋರ್ಟ್‌ ಮೆಟ್ಟಿಲೇರಿದ್ದು, ಡಿಸೆಂಬರ್ 12ರಂದು ವಿಚಾರಣೆ ನಿಗದಿಪಡಿಸಲಾಗಿದೆ ಎಂದು ಮಸೀದಿ ನಿರ್ವಹಣಾ ಸಮಿತಿಯ ಮುಖ್ಯಸ್ಥರು ಹೇಳಿದ್ದಾರೆ.

ADVERTISEMENT

ಬಂಡ–ಬರ್ಹೈಚ್ ಹೆದ್ದಾರಿ ವಿಸ್ತರಣೆಯ ಭಾಗವಾಗಿ ಅಕ್ರಮವಾಗಿ ನಿರ್ಮಿಸಲಾಗಿರುವ ಮಸೀದಿಯ ಒಂದು ಭಾಗ ಕೆಡವಬೇಕೆಂದು ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಮಸೀದಿ ನಿರ್ವಹಣಾ ಸಮಿತಿಯು ಇದನ್ನು ಪಾಲಿಸಿರಲಿಲ್ಲ ಎಂದು ವರದಿ ತಿಳಿಸಿದೆ.

‘ಹೆದ್ದಾರಿ ವಿಸ್ತರಣೆಗೆ ತೊಡಕಾಗಿದ್ದ ಮಸೀದಿಯ ಸುಮಾರು 20 ಮೀಟರ್ ಕಟ್ಟಡವನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಸ್ಥಳೀಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅವಶೇಷದ ತೆರವು ಕಾರ್ಯ ನಡೆಯುತ್ತಿದೆ’ಎಂದು ಲಲೌಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ವೃಂದಾವನ ರಾಯ್ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಾಚರಣೆ ವೇಳೆ ಲಲೌಲಿ ಪಟ್ಟಣದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು

ಸಂಭಲ್ ಘಟನೆಯ ಹಿನ್ನೆಲೆಯಲ್ಲಿ ಮತ್ತೊಂದು ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.