ADVERTISEMENT

₹1.20 ಕೋಟಿ ಮೌಲ್ಯದ ಆಕ್ಸಿಟಾಸಿನ್ ವಶ

ಅಂತರರಾಜ್ಯ ಜಾಲದ ಮೂವರು ಶಂಕಿತ ಸದಸ್ಯರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 14:30 IST
Last Updated 2 ಜುಲೈ 2025, 14:30 IST
.
.   

ಲಖನೌ (ಪಿಟಿಐ): ‘ಆಕ್ಸಿಟಾಸಿನ್ ಚುಚ್ಚುಮದ್ದು’ ಕಳ್ಳಸಾಗಾಣಿಕೆ ಮತ್ತು ಪೂರೈಕೆಯಲ್ಲಿ ತೊಡಗಿದೆ ಎನ್ನಲಾದ ಅಂತರರಾಜ್ಯ ಜಾಲದ ಮೂವರು ಶಂಕಿತ ಸದಸ್ಯರನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯು ಬುಧವಾರ ಬಂಧಿಸಿದೆ.

ಅಧಿಕ ಹಾಲು ಮತ್ತು ಅಧಿಕ ಇಳುವರಿ ಪಡೆಯುವ ದುರುದ್ದೇಶದಿಂದ ಜಾನುವಾರು ಹಾಗೂ ತರಕಾರಿ ಗಿಡಗಳಿಗೆ ನಿರ್ಬಂಧಿತ ‘ಆಕ್ಸಿಟಾಸಿನ್’ ಚುಚ್ಚುಮದ್ದನ್ನು ಅವೈಜ್ಞಾನಿಕವಾಗಿ ಬಳಸಲಾಗುತ್ತದೆ. ಈ ಚುಚ್ಚುಮದ್ದು ಪ್ರಾಣಿಗಳು ಮತ್ತು ಮಾನವನ ಆರೋಗ್ಯಕ್ಕೆ ಮಾರಕವಾಗಿದೆ.

ವಿಶೇಷ ಕಾರ್ಯಪಡೆಯು ಮನೆಯೊಂದರ ಮೇಲೆ ದಾಳಿ ನಡೆಸಿ ₹1.20 ಕೋಟಿ ಮೌಲ್ಯದ 5,87,880 ಮಿಲಿ ಲೀಟರ್‌ ‘ಆಕ್ಸಿಟಾಸಿನ್’ ವಶಪಡಿಸಿಕೊಂಡಿದೆ.

ADVERTISEMENT

‘ಬಂಧಿತರನ್ನು ಅನ್ಮೋಲ್‌ ಪಾಲ್‌, ಅವದೇಶ್‌ ಪಾಲ್‌, ಖಾಗೇಶ್ವರ್‌ ಎಂದು ಗುರುತಿಸಲಾಗಿದೆ. ಇವರಿಂದ ₹12,000 ನಗದು, 800 ಖಾಲಿ ಡಬ್ಬಿಗಳು, ರಬ್ಬರ್‌ ಮತ್ತು ಅಲ್ಯುಮಿನಿಯಂ ಮುಚ್ಚಳಗಳು, ಪ್ಲಾಸ್ಟಿಕ್‌ ಪೈಪ್‌ಗಳು, ಉಪ್ಪಿನ ಪೊಟ್ಟಣಗಳು, ಮೂರು ಮೊಬೈಲ್‌ ಫೋನ್‌ ಮತ್ತು ಸಾಗಿಸಲು ಬಳಸುವ ವಾಹನವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಕಾರ್ಯಪಡೆ ತಿಳಿಸಿದೆ.

‘ಈ ಜಾಲವು ಖನಿಜಯುಕ್ತ ನೀರಿನ ಪಾರ್ಸೆಲ್‌ ಹೆಸರಿನಲ್ಲಿ ಬಿಹಾರದಿಂದ ‘ಆಕ್ಸಿಟಾಸಿನ್’ ತರಿಸಿಕೊಂಡು ಸಣ್ಣ ಸಣ್ಣ ಡಬ್ಬಗಳಲ್ಲಿ ತುಂಬಿ ಅಕ್ರಮವಾಗಿ ಲಖನೌ ಮತ್ತು ಸುತ್ತಮುತ್ತ ಜಿಲ್ಲೆಗಳಲ್ಲಿ ವಿತರಿಸುತ್ತಿತ್ತು’ ಎಂದು ತಿಳಿಸಿದೆ.

ಕಕೋರಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.