ADVERTISEMENT

ಉತ್ತರಪ್ರದೇಶ: ಬಾಲಾಜಿ ದೇವಸ್ಥಾನದಲ್ಲಿ ಶಾರ್ಟ್ಸ್‌, ಮಿನಿ ಸ್ಕರ್ಟ್ ನಿಷೇಧ

​ಪ್ರಜಾವಾಣಿ ವಾರ್ತೆ
Published 17 ಮೇ 2023, 13:47 IST
Last Updated 17 ಮೇ 2023, 13:47 IST
jeans
jeans   

ಲಖನೌ: ಉತ್ತರಪ್ರದೇಶದ ಮುಜಾಫ್ಫರ್‌ ನಗರ ಜಿಲ್ಲೆಯಲ್ಲಿರುವ ಪ್ರಸಿದ್ಧ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ರಿಪ್ಡ್‌ ಜೀನ್ಸ್, ಬರ್ಮುಡಾ ಅಥವಾ ಮಿನಿ ಸ್ಕರ್ಟ್‌ಗಳನ್ನು ಧರಿಸುವಂತಿಲ್ಲ. ಅಂತಹ ಉಡುಪುಗಳು ಭಕ್ತರ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. 

ಸದಾ ಭಕ್ತರಿಂದ ಕಿಕ್ಕಿರಿದು ತುಂಬಿರುವ ಈ ದೇವಸ್ಥಾನದ ಹೊರಗೆ ಸೂಚನಾ ಫಲಕವೊಂದನ್ನು ಅಳವಡಿಸಿದ್ದು, ‘ದೇವಸ್ಥಾನದ ಆವರಣವನ್ನು ಪ್ರವೇಶಿಸಲು ಬಯಸುವ ಭಕ್ತರು ‘ಸಭ್ಯ’ವಾದ ಉಡುಗೆ ಧರಿಸಿರಬೇಕು’ ಎಂದು ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ.

‘ಎಲ್ಲ ಪುರುಷ ಮತ್ತು ಮಹಿಳೆಯರು ಸಭ್ಯವಾದ ಉಡುಪುಗಳನ್ನು ಧರಿಸಬೇಕು. ಯಾರೂ ಬರ್ಮುಡಾ, ಶಾರ್ಟ್ಸ್‌, ಮಿನಿ ಸ್ಕರ್ಟ್ಸ್ ಮತ್ತು ರಿಪ್ಡ್ ಜೀನ್ಸ್ (ಅಲ್ಲಲ್ಲಿ ಹರಿದಿರುವ ಜೀನ್ಸ್‌) ಅನ್ನು ಧರಿಸಿರುತ್ತಾರೋ ಅಂಥವರಿಗೆ ದೇವಸ್ಥಾನದ ಒಳಗೆ ಪ್ರವೇಶಿಸಲು ಅನುಮತಿ ಇಲ್ಲ. ಅಂಥ ಭಕ್ತರು ದೇವಸ್ಥಾನದ ಹೊರಗಿನಿಂದಲೇ ದೇವರ ದರ್ಶನ ಪಡೆಯಬಹುದು’ ಎಂದು ಸೂಚನಾ ಫಲಕದಲ್ಲಿ ತಿಳಿಸಲಾಗಿದೆ. ‌‌

ADVERTISEMENT

‘ಮಹಿಳಾ ಭಕ್ತರು ಸೀರೆ ಅಥವಾ ಸಲ್ವಾರ್‌–ಕುರ್ತಾ ಧರಿಸಿರಬೇಕು. ದೇವಸ್ಥಾನದ ಒಳಗೆ ಬರುವಾಗ ಹೆಣ್ಣುಮಕ್ಕಳು ತಮ್ಮ ತಲೆಯನ್ನು ಮುಚ್ಚಿಕೊಂಡಿರಬೇಕು ’ ಎಂದು ಬಾಲಾಜಿ ದೇವಸ್ಥಾನದ ಅರ್ಚಕ ಅಲೋಕ್ ಶರ್ಮಾ ಹೇಳಿದ್ದಾರೆ. 

‘ರಿಪ್ಡ್ ಜೀನ್ಸ್, ಶಾರ್ಟ್ಸ್‌ ಮತ್ತು ಮಿನಿ ಸ್ಕರ್ಟ್ಸ್‌ ಭಾರತೀಯ ಸಂಪ್ರದಾಯಕ್ಕೆ ಅನುಗುಣವಾಗಿಲ್ಲ. ಇಂಥ ಬಟ್ಟೆಗಳು ಭಕ್ತರ ಗಮನವನ್ನು ಬೇರೆ ಕಡೆಗೆ ಸೆಳೆಯುತ್ತವೆ. ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಈ ರೀತಿ ಬೇರೆ ಕಡೆಗೆ ಗಮನ ಹರಿಸುವುದು ಸರಿಯಲ್ಲ’ಎಂದು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಅಶೋಕ್ ಕುಮಾರ್ ಶರ್ಮಾ ತಿಳಿಸಿದ್ದಾರೆ. 

ಆದಾಗ್ಯೂ, ದೇವಸ್ಥಾನದ ಆಡಳಿತ ಮಂಡಳಿಯ ಈ ನಿರ್ಧಾರವು ಮಿಶ್ರ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ. ಕೆಲ ಯುವಜನರು ಇದನ್ನು ತೀವ್ರವಾಗಿ ಖಂಡಿಸಿದ್ದು, ‘ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರು ಯಾವ ರೀತಿಯ ಉಡುಗೆಯನ್ನು ಧರಿಸಬೇಕೆಂದು ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ’ ಎಂದೂ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.