
(ಚಿತ್ರ ಕೃಪೆ– X@thefunksociety1 ಹಾಗೂ ಐಸ್ಟಾಕ್)
ಲಖನೌ: ಮದುವೆ ಸಮಾರಂಭದಲ್ಲಿ ವಧು-ವರರ ಕಡೆಯ ಅತಿಥಿಗಳು ಚಿಕ್ಕನ್ ಫ್ರೈಗಾಗಿ ಹೊಡೆದಾಡಿಕೊಂಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. ಇದರಿಂದಾಗಿ ಸಂಭ್ರಮದಿಂದ ಕೂಡಿರಬೇಕಾದ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು. ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ತೀಬ್ರಿ ಗ್ರಾಮದಲ್ಲಿ ಭಾನುವಾರ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಜಗಳದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ತಮಗೆ ಸ್ವಲ್ಪ 'ಚಿಕನ್ ಫ್ರೈ' ಬಡಿಸಿದ್ದಾರೆ ಎಂದು ವರನ ಕಡೆಯ ಕೆಲವರು ದೂರಿದ್ದು, ಜಗಳ ಆರಂಭವಾಗಿದೆ. ಆಗ ಸಿಟ್ಟಿಗೆದ್ದ ವಧುವಿನ ಕಡೆಯವರು ಹೆಚ್ಚಿನ ಚಿಕನ್ ಫ್ರೈ ತಂದುಕೊಟ್ಟಿದ್ದಾರೆ. ಆ ವೇಳೆ ಬಡಿಸಿದ್ದು ಸರಿಯಾಗಿಲ್ಲ ಎಂದು ವರನ ಕಡೆಯವರು ಮತ್ತೆ ತಕರಾರು ತೆಗೆದಿದ್ದಾರೆ. ಇದರಿಂದ ಎರಡೂ ಕಡೆಯ ಕೆಲವು ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಜಗಳ ವಿಕೋಪಕ್ಕೆ ತಿರುಗಿ, ಪರಸ್ಪರರು ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪರಿಸ್ಥಿತಿ ತಿಳಿಗೊಂಡ ಬಳಿಕ ಪೊಲೀಸರು ಮತ್ತು ಹಿರಿಯ ಮುಸ್ಲಿಂ ಧರ್ಮಗುರುಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.