ADVERTISEMENT

ಬಿಹಾರ ಚುನಾವಣೆ: ಆರ್‌ಎಲ್‌ಎಸ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ಆನಂದ್‌ ರಾಜೀನಾಮೆ

ಬಿಎಸ್‌ಪಿ ಜೊತೆ ಮೈತ್ರಿಗೆ ಮುನಿಸು: ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆನಂದ್‌ ರಾಜೀನಾಮೆ

ಪಿಟಿಐ
Published 30 ಸೆಪ್ಟೆಂಬರ್ 2020, 10:59 IST
Last Updated 30 ಸೆಪ್ಟೆಂಬರ್ 2020, 10:59 IST
ಉಪೇಂದ್ರ ಕುಶ್ವಾಹ
ಉಪೇಂದ್ರ ಕುಶ್ವಾಹ   

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ, ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ್‌ ಸಮತಾ ಪಾರ್ಟಿಗೆ (ಆರ್‌ಎಲ್‌ಎಸ್‌ಪಿ) ಭಾರಿ ಹಿನ್ನಡೆಯಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಧವ್‌ ಆನಂದ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದೇ ಇದಕ್ಕೆ ಕಾರಣ.

ಪಕ್ಷವು ಮಾಯಾವತಿ ನೇತೃತ್ವದ ಬಿಎಸ್‌ಪಿ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿರುವುದೇ ಆನಂದ್‌ ಅವರ ಅಸಮಾಧಾನಕ್ಕೆ ಕಾರಣ. ‘ಬಿಎಸ್‌ಪಿ ಜೊತೆಗಿನ ಮೈತ್ರಿ ವಿನಾಶಕಾರಿ’ ಎಂದು ಹೇಳಿರುವ ಅವರು, ಪಕ್ಷದ ವಕ್ತಾರ ಸ್ಥಾನ, ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

‘ವೈಯಕ್ತಿಕವಾಗಿ ನನಗೆ ಬೇಸರವಾಗಿದೆ ಎಂಬ ಕಾರಣಕ್ಕೆ ಪಕ್ಷವನ್ನು ತೊರೆಯುತ್ತಿಲ್ಲ. 2017ರಲ್ಲಿ ಪಕ್ಷವನ್ನು ಸೇರಿದ ನಾನು ಪಕ್ಷ ಸಂಘಟನೆ ಬಲಪಡಿಸಲು ಶ್ರಮಿಸಿದ್ದೇನೆ. ಆದರೆ, ಈಗಿನ ನಡೆಯಿಂದ ಪಕ್ಷವೇ ನಾಶವಾಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕುಶ್ವಾಹ, ‘ನಮ್ಮ ಹಡಗು ಸಾಗರದಲ್ಲಿ ದೂರ ಸಾಗುವ ಮೊದಲೇ ಕೆಲವರು ಕೆಳಗಿಳಿದಿರುವುದು ಒಳ್ಳೆಯದು’ ಎಂದು ಹೇಳಿದ್ದಾರೆ.

‘ಚುನಾವಣೆ ಸಮೀಪಿಸುತ್ತಿರುವಾಗ ಹಿರಿಯ ನಾಯಕರು, ಕೆಲವು ಸಚಿವರೇ ಪಕ್ಷಗಳನ್ನು ಬದಲಿಸುತ್ತಿರುವಾಗ, ನಮ್ಮ ಪಕ್ಷದ ಕೆಲವರು ಹೊರನಡೆಯುತ್ತಿರುವುದು ಅಂಥ ದೊಡ್ಡ ವಿಷಯವೇನಲ್ಲ’ ಎಂದೂ ಹೇಳಿದ್ದಾರೆ.

ಆಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ಹೆಚ್ಚು ಒಲವಿರುವ ಕಾರಣ ಗಮನ ಸೆಳೆಯುತ್ತಿದ್ದ ಆನಂದ್‌, ಪಕ್ಷದ ಪ್ರಮುಖ ನಾಯಕರಾಗಿಯೂ ಗುರುತಿಸಿಕೊಂಡಿದ್ದರು. ಬಿಎಸ್‌ಪಿ ಹಾಗೂ ಜನತಾಂತ್ರಿಕ್‌ ಪಾರ್ಟಿ (ಸಮಾಜವಾದಿ) ಜೊತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಉಪೇಂದ್ರ ಕುಶ್ವಾಹ ಘೋಷಣೆ ಮಾಡಿದ ಸಂದರ್ಭದಲ್ಲಿ, ಪಕ್ಕದಲ್ಲಿಯೇ ಕುಳಿತಿದ್ದ ಆನಂದ್‌ ಅವರ ಮುಖ ಕಳೆಗುಂದಿತ್ತು.

ನಂತರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ಪಿ ನಾಯಕಿ ಮಾಯಾವತಿ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕುಶ್ವಾಹ ಅವರಿಗೆ ಪಕ್ಷ ಬೆಂಬಲ ನೀಡುತ್ತದೆ ಎಂದು ಘೋಷಿಸಿದರು. ವಿರೋಧಿ ಪಾಳೆಯದಲ್ಲಿರುವ ಎನ್‌ಡಿಎ, ಆರ್‌ಜೆಡಿ, ಕಾಂಗ್ರೆಸ್‌ ಒಳಗೊಂಡಿರುವ ಮಹಾ ಮೈತ್ರಿ ಸೇರಿದಂತೆ ಇತರ ಪಕ್ಷಗಳು ಮಾಯಾವತಿಯವರ ಈ ನಿಲುವನ್ನು ಅಪಹಾಸ್ಯ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.