ADVERTISEMENT

ಇಸ್ರೊ ನಿರ್ಮಿತ ರಾಕೆಟ್ ಬಳಕೆಗೆ ಅಮೆರಿಕ ಬಾಹ್ಯಾಕಾಶ ಕಂಪನಿ ಒಲವು

ಪಿಟಿಐ
Published 11 ಮೇ 2025, 13:34 IST
Last Updated 11 ಮೇ 2025, 13:34 IST
-
-   

ನವದೆಹಲಿ: ಅಮೆರಿಕದ ಕಂಪನಿ ವ್ಯಾಸ್ಟ್‌, ಭೂ ಕಕ್ಷೆಯಲ್ಲಿ ತಾನು ನಿರ್ಮಿಸಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾನಿಗಳನ್ನು ಒಯ್ಯಲು ಭಾರತದ ರಾಕೆಟ್‌ ಬಳಸುವುದಕ್ಕೆ ಆಸಕ್ತಿ ವ್ಯಕ್ತಪಡಿಸಿದೆ.

ಇಲ್ಲಿ ನಡೆಯುತ್ತಿರುವ ಜಾಗತಿಕ ಬಾಹ್ಯಾಕಾಶ ಅನ್ವೇಷಣಾ ಸಮಾವೇಶದ (ಗ್ಲೋಬಲ್ ಸ್ಪೇಸ್‌ ಎಕ್ಸ್‌ಪ್ಲೋರೇಷನ್ ಕಾನ್ಫರೆನ್ಸ್‌ ) ಸಂದರ್ಭದಲ್ಲಿ, ಕಂಪನಿಯ ಸಿಇಒ ಮ್ಯಾಕ್ಸ್‌ ಹೋಟ್‌ ಅವರು ಇಸ್ರೊ ವಿಜ್ಞಾನಿಗಳನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ.

ಕ್ಯಾಲಿಫೋರ್ನಿಯಾ ಮೂಲದ ಈ ಕಂಪನಿಯು ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡುತ್ತಿರುವ ಜಗತ್ತಿನ ಮೊದಲ ಕಂಪನಿಯಾಗಿದೆ. ಸದ್ಯದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು (ಐಎಸ್‌ಎಸ್‌) 2031ರಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ. ಆ ಬಳಿಕ, ವ್ಯಾಸ್ಟ್‌ ನಿರ್ಮಿಸುವ ಬಾಹ್ಯಾಕಾಶ ನಿಲ್ದಾಣವೇ ಪ್ರಮುಖವಾಗಲಿದೆ.

ADVERTISEMENT

ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಹೋಟ್‌, ‘ಮುಂದಿನ ವರ್ಷ ಮೇ ವೇಳೆಗೆ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್–9’ ರಾಕೆಟ್‌ ಬಳಸಿ ‘ಹೆವೆನ್–1’ ಹೆಸರಿನ ಬಾಹ್ಯಾಕಾಶ ನಿಲ್ದಾಣ ಉಡ್ಡಯನ ಮಾಡುವ ಯೋಜನೆ ಹೊಂದಲಾಗಿದೆ’ ಎಂದು ಹೇಳಿದ್ದಾರೆ.

‘ಭಾರತ ಕೈಗೊಳ್ಳುತ್ತಿರುವ ಗಗನಯಾನ ಕಾರ್ಯಕ್ರಮದಿಂದ ಆಕರ್ಷಿತನಾಗಿದ್ದೇನೆ. ನಮ್ಮ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕರೆದೊಯ್ಯಲು ಗಗನಯಾನ ಕಾರ್ಯಕ್ರಮದ ರಾಕೆಟ್‌ಗಳನ್ನು ಬಳಸಿಕೊಳ್ಳುವ ಸಾಧ್ಯತೆ ಕುರಿತು ಪರಿಶೀಲಿಸುತ್ತಿದ್ಧೇವೆ’ ಎಂದು ಹೇಳಿದ್ದಾರೆ.

ಇಸ್ರೊ ನಿರ್ಮಿತ ರಾಕೆಟ್‌ ‘ಎಲ್‌ಎಂವಿ–3’, ಗಗನಯಾನ ಕಾರ್ಯಕ್ರಮದ ನೌಕೆಯನ್ನು ಹೊತ್ತೊಯ್ಯಲಿದೆ. ಈ ಕಾರ್ಯಕ್ರಮವನ್ನು 2027ರ ಮೊದಲ ತ್ರೈಮಾಸಿಕದಲ್ಲಿ ಕಾರ್ಯಗತಗೊಳಿಸಲು ನಿಗದಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.