ADVERTISEMENT

ನ್ಯಾಯಾಲಯದಲ್ಲಿ ಸ್ಥಳೀಯ ಭಾಷೆ ಬಳಕೆ: ಪ್ರಧಾನಿ ಮೋದಿ, ಸಿಜೆಐ ರಮಣ ಪ್ರತಿಪಾದನೆ

ಪಿಟಿಐ
Published 30 ಏಪ್ರಿಲ್ 2022, 19:17 IST
Last Updated 30 ಏಪ್ರಿಲ್ 2022, 19:17 IST
ಪ್ರಧಾನಿ ಮೋದಿ, ಸಿಜೆಐ ರಮಣ
ಪ್ರಧಾನಿ ಮೋದಿ, ಸಿಜೆಐ ರಮಣ   

ನವದೆಹಲಿ: ಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆ ಬಳಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌.ವಿ. ರಮಣ ಅವರು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ.‘ಹಿಂದಿ ಹೇರಿಕೆ’ ವಿಚಾರವಾಗಿ ದೇಶದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿಯೇ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆ ಬಳಕೆಯಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಹೆಚ್ಚುತ್ತದೆ. ಜೊತೆಗೆ ವ್ಯವಸ್ಥೆಯ ಜೊತೆಗೆ ಸಂಪರ್ಕ ಸಾಧಿಸಲು ಅವರಿಗೆ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸ್ಥಳೀಯ ಭಾಷೆಗಳ ಬಳಕೆ ಆರಂಭಿಸಲು ಇದು ಸಕಾಲ ಎಂದು ಸಿಜೆಐ ರಮಣ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗಳ ಜಂಟಿ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಶನಿವಾರ ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಎರಡು ರೀತಿಯ ಭಾಷಾ ಬಳಕೆ ಇದೆ. ಕಾನೂನು ಪರಿಭಾಷೆಗಳುಳ್ಳ ಭಾಷೆಯದ್ದು ಒಂದು ಮಾದರಿ. ಮತ್ತೊಂದು ಮಾದರಿಯು ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವ ಸರಳ ಭಾಷೆಯಾಗಿದೆ. ಹಲವು ದೇಶಗಳಲ್ಲಿ ನಡೆಯುತ್ತಿರುವ ನ್ಯಾಯದಾನ ವಿಧಾನಗಳನ್ನು ಗಮನಿಸಿದರೆ, ಎರಡೂ ರೀತಿಯ ಮಾದರಿಗಳು ಕಾನೂನುಪ್ರಕಾರ ಸ್ವೀಕಾರಾರ್ಹವಾಗಿವೆ ಎಂದು ಪ್ರಧಾನಿ ವಿವರಿಸಿದರು.

ADVERTISEMENT

ಭಾಷಾ ಪ್ರಾವೀಣ್ಯವೇ ಮುಖ್ಯವಲ್ಲ: ಪ್ರಧಾನಿ ಭಾಷಣಕ್ಕೂ ಮುನ್ನ ಮಾತನಾಡಿದ ಸಿಜೆಐ ರಮಣ ಅವರು ಸ್ಥಳೀಯ ಭಾಷೆಗಳ ಪರವಾಗಿ ದನಿ ಎತ್ತಿದರು. ಸಾಂವಿಧಾನಿಕ ನ್ಯಾಯಾಲಯಗಳ ಮುಂದೆ ಮಂಡಿಸುವ ವಾದವು ಬುದ್ಧಿವಂತಿಕೆ ಮತ್ತು ಕಾನೂನಿನ ತಿಳಿವಳಿಕೆಯ ಆಧಾರದಲ್ಲಿ ಇರಬೇಕು. ಭಾಷಾ ಪ್ರಾವೀಣ್ಯವಷ್ಟೇ ಇಲ್ಲಿ ಮುಖ್ಯವಲ್ಲ ಎಂದು ರಮಣ ಹೇಳಿದ್ದಾರೆ.

‘ಪ್ರಜಾಪ್ರಭುತ್ವದ ಇತರ ಸಂಸ್ಥೆಗಳ ರೀತಿಯಲ್ಲೇ ನ್ಯಾಯಾಂಗ ಸಹ ಸಮಾಜ ಮತ್ತು ಭೌಗೋಳಿಕ ವೈವಿಧ್ಯವನ್ನು ಪ್ರತಿಬಿಂಬಿಸಬೇಕು. ಹೈಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆ ಬಳಸಬೇಕು ಎಂಬ ಬಗ್ಗೆ ನನಗೆ ಸಾಕಷ್ಟು ಅಹವಾಲುಗಳು ಬಂದಿವೆ. ಈ ಬೇಡಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ’ ಎಂದು ರಮಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.