ADVERTISEMENT

ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವುದು ಮೂಲಭೂತ ಹಕ್ಕಲ್ಲ: ಅಲಹಾಬಾದ್‌ ಹೈಕೋರ್ಟ್‌

ಧ್ವನಿವರ್ಧಕ ಬಳಕೆ ನಿರಾಕರಣೆ ಪ್ರಶ್ನಿಸಿದ್ದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 7 ಮೇ 2022, 0:53 IST
Last Updated 7 ಮೇ 2022, 0:53 IST
   

ಲಖನೌ: ‘ಮಸೀದಿಗಳಲ್ಲಿ ಆಜಾನ್‌ ಕೂಗಲು ಧ್ವನಿವರ್ಧಕ ಬಳಸುವುದು ಮೂಲಭೂತ ಹಕ್ಕಲ್ಲ. ಇದು ಕಾನೂನಿನಲ್ಲಿ ಸ್ಪಷ್ಟವಾಗಿದೆ’ ಎಂದು ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ.

ಆಜಾನ್‌ ಧ್ವನಿವರ್ಧಕಕ್ಕೆ ಪ್ರತಿಯಾಗಿ,ಅಲಹಾಬಾದ್‌ನಲ್ಲಿ ಧ್ವನಿ ವರ್ಧಕಗಳಿಂದ ಭಜನೆ ಆರಂಭಿಸುವುದಾಗಿ ಹಿಂದೂ ಸಂಘಟನೆಗಳು ಪ್ರಕಟಿಸಿದ ಹಿನ್ನೆಲೆಯಲ್ಲಿ ಉಂಟಾದ ವಿವಾದದ ವೇಳೆಹೈಕೋರ್ಟ್‌ನಿಂದ ಮಹತ್ವದ ತೀರ್ಪು ಬಂದಿದೆ.

ಉತ್ತರ ಪ್ರದೇಶದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ನಿಷೇಧಿಸಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಇದು ಕಾನೂನು ಬಾಹಿರ ಮತ್ತು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ವಾದಿಸಿ ಬದೌನ್‌ ಜಿಲ್ಲೆಯ ಇರ್ಫಾನ್‌ ಕೋರ್ಟ್ ಮೊರೆ ಹೋಗಿದ್ದರು.

ADVERTISEMENT

ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿವೇಕ್‌ ಕುಮಾರ್‌ ಬಿರ್ಲಾ ಮತ್ತು ವಿಕಾಸ್‌ ಬುಧ್ವಾರ್‌ ನೇತೃತ್ವದ ದ್ವಿಸದಸ್ಯ ಪೀಠವು, ‘ಈ ಅರ್ಜಿ ತಪ್ಪುಗ್ರಹಿಕೆಯಿಂದ ಕೂಡಿದ್ದು, ವಜಾಗೊಳಿಸಲಾಗುತ್ತಿದೆ’ ಎಂದು ತಿಳಿಸಿದೆ.

ಧ್ವನಿವರ್ಧಕ ಬಳಕೆ ನಿರಾಕರಣೆಗೆಅಧಿಕಾರಿಗಳು ಸಕಾರಣ ನೀಡಬೇಕು ಎಂದು ಪೀಠವು ಸೂಚಿಸಿದೆ.

ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಸುಮಾರು 54 ಸಾವಿರ ‘ಅಕ್ರಮ’ ಧ್ವನಿವರ್ಧಕಗಳನ್ನು ತೆರವುಗೊಳಿಸಿದೆ. ಪ್ರಸಿದ್ಧ ಗೋರಖನಾಥ ದೇವಸ್ಥಾನದ ಮೇಲಿನ ಧ್ವನಿವರ್ಧಕವನ್ನು, ನಿವಾಸಿಗಳು ಹೆಚ್ಚಿನ ಡೆಸಿಬಲ್‌ ಶಬ್ದ ಕೇಳಿಸಿಕೊಳ್ಳಲಾಗದು ಎಂದಿದ್ದಕ್ಕೆ ಇತ್ತೀಚೆಗೆ ರಸ್ತೆ ಕಡೆಗೆ ತಿರುಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.