ADVERTISEMENT

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ: ಯೋಗಿ, ಪ್ರಿಯಾಂಕಾ, ಮಾಯಾ ಭವಿಷ್ಯ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 19:30 IST
Last Updated 8 ಜನವರಿ 2022, 19:30 IST
ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ರಾಜಕೀಯವಾಗಿ ಪ್ರಭಾವ ಬೀರುವಂತಹ ಹೋರ್ಡಿಂಗ್‌ ಅನ್ನು ಗೋರಖಪುರ ನಗರ ನಿಗಮದ ಕಾರ್ಮಿಕರು ಶನಿವಾರ ತೆರವು ಮಾಡಿದರು    –ಪಿಟಿಐ ಚಿತ್ರ
ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ರಾಜಕೀಯವಾಗಿ ಪ್ರಭಾವ ಬೀರುವಂತಹ ಹೋರ್ಡಿಂಗ್‌ ಅನ್ನು ಗೋರಖಪುರ ನಗರ ನಿಗಮದ ಕಾರ್ಮಿಕರು ಶನಿವಾರ ತೆರವು ಮಾಡಿದರು    –ಪಿಟಿಐ ಚಿತ್ರ   

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಅವರ ಪಕ್ಷದೊಳಗೆ ಇರುವ ಸ್ಥಾನಮಾನವನ್ನು ರಾಜ್ಯದ ವಿಧಾನಸಭೆ ಚುನಾವಣೆಯು ನಿರ್ಧರಿಸಲಿದೆ. ಜೊತೆಗೆ, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರ ಭವಿಷ್ಯವನ್ನು ಚುನಾವಣೆಯು ನಿರ್ಧರಿಸಲಿದೆ.

ಈ ಚುನಾವಣೆಯು ಆದಿತ್ಯನಾಥ ಅವರ ಪಾಲಿಗೆ ನಿರ್ಣಾಯಕವಾಗಿದೆ. ಅವರ ಆಡಳಿತ ವೈಖರಿ ಕುರಿತು ಅಸಮಾಧಾನವಿದ್ದ ರಾಜ್ಯ ಬಿಜೆಪಿ ಮುಖಂಡರು ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಬದಲಾವಣೆಗಾಗಿ ಪಟ್ಟುಹಿಡಿದಿದ್ದರು. ಆದರೆ ಆದಿತ್ಯನಾಥ ಅವರು ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತ ಎಂದು ಹೇಳಲಾಗಿದ್ದ ಮಾಜಿ ಅಧಿಕಾರಿಯೊಬ್ಬರನ್ನು ಉತ್ತರ ಪ್ರದೇಶದ ಮಂತ್ರಿಯನ್ನಾಗಿ ನೇಮಕ ಮಾಡುವುದನ್ನೂ ತಡೆಯುವಲ್ಲಿ ಅವರು ಯಶಸ್ವಿ ಆದರು.

ADVERTISEMENT

ಹಿಂದುತ್ವವಾದದ ಪರವಾಗಿರುವ ಮತ ಬ್ಯಾಂಕ್‌, ಯೋಗಿ ಆಡಳಿತದಲ್ಲಿ ನಡೆದಿದೆ ಎಂದು ಹೇಳಿಕೊಳ್ಳಲಾಗುತ್ತಿರುವ ಅಭಿವೃದ್ಧಿ ಕೆಲಸಗಳು ಬೆನ್ನಿಗಿದ್ದರೂ, ಕೋವಿಡ್‌ ಎರಡನೇ ಅಲೆಯ ಅಸಮರ್ಪಕ ನಿರ್ವಹಣೆ, ದಲಿತರ ವಿರುದ್ಧ ನಡೆಯುತ್ತಿರುವ ದಾಳಿ ಪ್ರಕರಣಗಳಲ್ಲಿ ಹೆಚ್ಚಳ, ಲಖಿಂಪುರ ಖೇರಿ ಪ್ರಕರಣ ನಿರ್ವಹಿಸಿದ ರೀತಿ ಮತ್ತಿತರ ವೈಫಲ್ಯಗಳಿಂದ ಅವರು ಕಟು ಟೀಕೆಗಳನ್ನು ಎದುರಿಸಬೇಕಾಗಿದೆ.

ಈ ಬಾರಿಯ ಚುನಾವಣೆ ಯೋಗಿ ಆದಿತ್ಯನಾಥ ಅವರಿಗೆ ಪರೀಕ್ಷೆ ಆಗಿರಲಿದೆ ಎಂದು ಬಿಜೆಪಿ ಮುಖಂಡರೇ ಅಭಿಪ್ರಾಯಪಟ್ಟಿದ್ದಾರೆ.

‘ಈ ಚುನಾವಣೆಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿದರೆ ಪಕ್ಷದ ಒಳಗೆ ಆದಿತ್ಯನಾಥ ಅವರ ಸ್ಥಾನ ಗಟ್ಟಿಯಾಗಲಿದೆ. ಮೋದಿ ಅವರಿಗೆ ಸ್ಪರ್ಧಿಯಾಗಿ ಯೋಗಿ ಹೊರಹೊಮ್ಮಬಹುದು’ ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ಅಖಿಲೇಶ್‌ಗೆ ಮಹತ್ವದ ಚುನಾವಣೆ: ಅಖಿಲೇಶ್‌ ಯಾದವ್‌ ಅವರಿಗೂ ಈ ಚುನಾವಣೆ ನಿರ್ಣಾಯಕವಾಗಿದೆ. ಅವರ ತಂದೆ, ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ರ ಪರಂಪರೆಯನ್ನು ಅಖಿಲೇಶ್‌ ಮುಂದುವರಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ದೊರಕಲಿದೆ. ‘2012ರಲ್ಲಿ ಅಖಿಲೇಶ್‌ಗೆ ಮುಖ್ಯಮಂತ್ರಿ ಸ್ಥಾನವನ್ನು ಅವರ ತಂದೆಯೇ ಅನಾಯಾಸವಾಗಿ ನೀಡಿದ್ದರು. ಆದರೆ, 2017ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಎಸ್‌ಪಿಯ ಚುನಾವಣಾ ಭವಿಷ್ಯವನ್ನು ಪುನಶ್ಚೇತನ ಮಾಡಲು ಅಖಿಲೇಶ್‌ರಿಂದ ಸಾಧ್ಯವಿದೆಯೇ ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ. ಮತ್ತೊಂದು ವೈಫಲ್ಯವು ಅವರ ರಾಜಕೀಯ ಜೀವನದ ವಿನಾಶವಾಗಿ ಪರಿಣಮಿಸಬಹುದು’ ಎಂದು ಎಸ್‌ಪಿ ಮುಖಂಡರೊಬ್ಬರು ಹೇಳಿದ್ದಾರೆ.

ಪ್ರಿಯಾಂಕಾ ಶ್ರಮಕ್ಕೆ ಪ್ರತಿಫಲ?: ಕಾಂಗ್ರೆಸ್‌ ಕಾರ್ಯಕರ್ತರನ್ನು ಒಂದು ಮಟ್ಟಕ್ಕೆ ಹುರುಪುಗೊಳಿಸುವ ಶಕ್ತಿ ಪ್ರಿಯಾಂಕಾ ಗಾಂಧಿ ಅವರಿಗೆ ಇದೆ ಎಂದು ಬೇರೆ ಪಕ್ಷದ ನಾಯಕರೂ ಒಪ್ಪಿಕೊಳ್ಳುತ್ತಾರೆ. ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಪುನಶ್ಚೇತನ ನೀಡಲು ಪ್ರಿಯಾಂಕಾ ಶ್ರಮಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸಂಘಟನೆಯು ಬುಡಮಟ್ಟದಿಂದಲೇ ಗಟ್ಟಿಯಾಗಿಲ್ಲದ ಕಾರಣ ಪ್ರಿಯಾಂಕಾ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ಕಷ್ಟ. ಕಾಂಗ್ರೆಸ್‌ ಸಾಧಾರಣ ಪ್ರದರ್ಶನ ನೀಡಿದರೂ ಪಕ್ಷದಲ್ಲಿ ಪ್ರಿಯಾಂಕಾ ಅವರು ದೊಡ್ಡ ನಾಯಕಿಯಾಗಿ ಹೊರಹೊಮ್ಮುತ್ತಾರೆ ಎಂದು ಪಕ್ಷದ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಬಿಎಸ್‌ಪಿಗೂ ನಿರ್ಣಾಯಕ

ಕಳೆದ ಹಲವು ವರ್ಷಗಳಿಂದ ಬಿಎಸ್‌ಪಿಯು ದೊಡ್ಡ ಮಟ್ಟದಲ್ಲಿ ವೈಫಲ್ಯ ಅನುಭವಿಸುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿಯ ಪ್ರದರ್ಶನ ಮಾಯಾವತಿ ಅವರಿಗೂ ಅತಿ ಮುಖ್ಯವಾಗಿದೆ. 2017ರ ಚುನಾವಣೆಯಲ್ಲಿ ಗೆದ್ದಿದ್ದ ಬಿಎಸ್‌ಪಿಯ 19 ಶಾಸಕರಲ್ಲಿ ಸುಮಾರು 16 ಶಾಸಕರು ಪಕ್ಷ ತೊರೆದು ಬೇರೆ ಪಕ್ಷಗಳನ್ನು ಸೇರಿದ್ದಾರೆ. ಅಥವಾ ಪಕ್ಷದಿಂದ ಉಚ್ಚಾಟನೆ ಆಗಿದ್ದಾರೆ. ಮತ್ತೊಂದು ಕಳಪೆ ಪ್ರದರ್ಶನವು ಅವರ ಪಕ್ಷವನ್ನು ಮತ್ತಷ್ಟು ಅಪ್ರಸ್ತುತ ಮಾಡಲಿದೆ.

ಉಚಿತ ಲ್ಯಾಪ್‌ಟಾಪ್‌: ಎಸ್‌ಪಿ ಭರವಸೆ

l ಉತ್ತರ ಪ್ರದೇಶದ ಯುವತಿಯರ ಜೊತೆ ಸಂವಾದ ನಡೆಸುವ ಮೂಲಕ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರಿಂದ ವರ್ಚುವಲ್‌ ಚುನಾವಣಾ ಪ್ರಚಾರಕ್ಕೆ ಚಾಲನೆ

l ಎಸ್‌ಪಿ ಅಧಿಕಾರಕ್ಕೆ ಬಂದರೆ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸುವ ಭರವಸೆ ನೀಡಿದ ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌. ಇತ್ತೀಚೆಗೆ ಐಟಿ ದಾಳಿ ನಡೆದಿದ್ದ ಕಾನ್ಪುರ ಸುಗಂಧದ್ರವ್ಯ ವ್ಯಾಪಾರಿ ಜೊತೆಗೆ ತಮ್ಮ ಭಾವಚಿತ್ರಗಳನ್ನು ಹರಿಬಿಡುತ್ತಿರುವ ಬಿಜೆಪಿ ಐಟಿ ಸೆಲ್‌ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು

l ಚುನಾವಣೆ ನಿಗದಿ ಆಗಿರುವ ಐದು ರಾಜ್ಯಗಳಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯ (ಸಿಎಪಿಎಫ್‌) ಸುಮಾರು 50,000 ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸುಮಾರು 500 ತುಕಡಿಗಳು ನಿಯೋಜನೆ ಆಗಲಿವೆ. ಅವುಗಳಲ್ಲಿ ಉತ್ತರ ಪ್ರದೇಶ ಒಂದೇ ರಾಜ್ಯಕ್ಕೆ ಸುಮಾರು 375 ತುಕಡಿಗಳನ್ನು ನಿಯೋಜಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.