ಎಐ ಚಿತ್ರ
ನೊಯಿಡಾ: ಸಾಕು ನಾಯಿಯನ್ನು ತೆಗಳಿದರೆಂಬ ಕಾರಣಕ್ಕೆ ಶ್ವಾನವೊಂದರ ಮಾಲೀಕನು ಪಕ್ಕದ ಮನೆ ನಿವಾಸಿಯ ಮೂಗನ್ನು ಕೊಯ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಗಳ ಪ್ರಕಾರ, ನೊಯ್ಡಾ ಜಿಲ್ಲೆಯ ನತ್ ಕಿ ಮದೈಯ್ಯ ಗ್ರಾಮದಲ್ಲಿ ಜುಲೈ 8ರಂದು ಈ ಘಟನೆ ನಡೆದಿದೆ. ಸಂತ್ರಸ್ತ ವ್ಯಕ್ತಿಯನ್ನು ದೇವೇಂದ್ರ ಎಂದು ಗುರುತಿಸಲಾಗಿದೆ.
ಪಕ್ಕದ ಮನೆಯ ನಾಯಿ ಪದೇ ಪದೇ ಬೊಗಳುತ್ತಿದ್ದ ಕಾರಣ ದೇವೇಂದ್ರ ಅದನ್ನು ಗದರಿಸಿ, ಬೈದಿದ್ದಾರೆ. ಇದರಿಂದ ಶ್ವಾನದ ಮಾಲೀಕ ಸತೀಶ್ ಹಾಗೂ ಅವರ ಸಹೋದರ ಅಮಿತ್ ಮತ್ತು ಪುತ್ರ ತುಷಾರ್ ಕೋಪಗೊಂಡು, ದೇವೇಂದ್ರ ಹಾಗೂ ಅವರ ಪತ್ನಿ ಮುನ್ನಿ ದೇವಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಚೂಪಾದ ಆಯುಧ ಬಳಸಿ ದೇವೇಂದ್ರ ಅವರ ಮೂಗು ಕೊಯ್ದಿದ್ದಾರೆ ಎಂದು ದೇವೇಂದ್ರ ಅವರ ತಂದೆ ಸುಖ್‌ಬೀರ್ ಸಿಂಗ್ ದೂರು ದಾಖಲಿಸಿದ್ದಾರೆ.
ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.