ADVERTISEMENT

UP Elections: ಎಸ್‌ಪಿ ಅಧಿಕಾರಕ್ಕೆ ಬಂದರೆ ಮಾಫಿಯಾ ರಾಜ್‌ ಮರಳಲಿದೆ- ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 10:18 IST
Last Updated 29 ಜನವರಿ 2022, 10:18 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ   

ಲಖನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮೈತ್ರಿಯು ಮತ ಎಣಿಕೆಯವರೆಗೆ ಮಾತ್ರ ಇರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ಮುಜಾಫರ್‌ನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ಈ ಬಾರಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಸರ್ಕಾರ ರಚಿಸಿದರೆ, ಅಜಂ ಖಾನ್ ಸಂಪುಟದ ಭಾಗವಾಗಲಿದ್ದಾರೆ. ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ ಹೊರಗೆ ಇರಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಸಮಾಜವಾದಿ ಹಾಗೂ ಬಹುಜನ ಸಮಾಜ ಪಕ್ಷಗಳ ಆಡಳಿತದಲ್ಲಿ ಉತ್ತರ ಪ್ರದೇಶವನ್ನು ಮಾಫಿಯಾಗಳು ವಶಪಡಿಸಿಕೊಂಡಿದ್ದವು. ಧರ್ಮ ಮತ್ತು ಜಾತಿಯ ಆಧಾರದ ಮೇಲೆ ರಾಜಕೀಯ ಮಾಡಿದವರು ಇಲ್ಲಿ ಪ್ರಾಬಲ್ಯ ಹೊಂದಿದ್ದರು’ ಎಂದು ಕೇಂದ್ರ ಗೃಹ ಸಚಿವರು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಉಭಯ ಪಕ್ಷಗಳ ಪೈಕಿ ಯಾರಾದರೂ ಮತ್ತೆ ಸರ್ಕಾರ ರಚಿಸಿದರೆ ಯುಪಿಯಲ್ಲಿ ಮಾಫಿಯಾ ರಾಜ್ ಮರಳಲಿದೆ. ಆದರೆ, ನೀವು ಬಿಜೆಪಿಗೆ ಮತ ಹಾಕಿದರೆ ಉತ್ತರ ಪ್ರದೇಶ ಭಾರತದ ನಂಬರ್ ಒನ್‌ ರಾಜ್ಯವಾಗಿ ಹೊರಹೊಮ್ಮಲಿದೆ’ ಎಂದು ಶಾ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಸಮಾಜವಾದಿ ಪಕ್ಷದೊಂದಿಗೆ ರಾಷ್ಟ್ರೀಯ ಲೋಕದಳ ಮೈತ್ರಿ ಮಾಡಿಕೊಂಡಿದೆ. ರಾಷ್ಟ್ರೀಯ ಲೋಕದಳವು ಪಶ್ಚಿಮ ಯುಪಿಯಲ್ಲಿ ಪ್ರಾಬಲ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.