ADVERTISEMENT

ಬಿಜೆಪಿಗೆ ಸಹಾಯ ಮಾಡಲು ಎಐಎಂಐಎಂ ಬಯಸಿದೆ ಎಂಬ ಆರೋಪಕ್ಕೆ ಒವೈಸಿ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 13:18 IST
Last Updated 29 ಜನವರಿ 2022, 13:18 IST
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ    

ಲಖನೌ: ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷಗಳು ಮುಸ್ಲಿಮರ ಮತಗಳನ್ನು ಮಾತ್ರ ಬಯಸುತ್ತವೆ. ಆದರೆ, ಅವರು ಮುಸ್ಲಿಮರಿಗೆ ಟಿಕೆಟ್‌ ನೀಡಲು ಹಿಂದೇಟು ಹಾಕುತ್ತಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಟೀಕಿಸಿದ್ದಾರೆ.

ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ‘ಎನ್‌ಡಿಟಿವಿ‘ ಜೊತೆ ಒವೈಸಿ ಮಾತನಾಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಒಡೆದು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಹಾಯ ಮಾಡಲು ಎಐಎಂಐಎಂ ಬಯಸಿದೆ ಎಂಬ ಆರೋಪವನ್ನು ಒವೈಸಿ ತಳ್ಳಿಹಾಕಿದ್ದಾರೆ.

ADVERTISEMENT

‘ಜಾತ್ಯತೀತರು ಎಂದು ಕರೆಸಿಕೊಳ್ಳಲು ಬಯಸುವ ಜನರಿಗೆ ಮುಸ್ಲಿಮರು ರತ್ನಗಂಬಳಿ ಹಾಸಬೇಕು ಮತ್ತು ಜಿಂದಾಬಾದ್ ಘೋಷಣೆಗಳನ್ನು ಕೂಗಬೇಕು. ಇದನ್ನಷ್ಟೇ ಅವರು ಬಯಸುತ್ತಾರೆ. ಚುನಾವಣೆಯಲ್ಲಿ ಟಿಕೆಟ್ ಬೇಕಾದರೆ ಮುಸ್ಲಿಮರು ಭಿಕ್ಷೆ ಕೇಳಬೇಕು. ಇದು ಅವರ ಬೂಟಾಟಿಕೆ ಮತ್ತು ದ್ವಂದ್ವ ನೀತಿಗಳನ್ನು ತೋರಿಸುತ್ತದೆ’ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.

‘ಕಳೆದ ಐದು ವರ್ಷಗಳಲ್ಲಿ, ರಾಜ್ಯದಲ್ಲಿ ನಮ್ಮ ನೆಲೆಯನ್ನು ಬಲಪಡಿಸಿಕೊಳ್ಳಲು ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಯುಪಿ ಜನರು ನಮ್ಮನ್ನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಒವೈಸಿ ಹೇಳಿದ್ದಾರೆ.

ಮುಂದಿನ ತಿಂಗಳು ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಎಸ್‌ಪಿ ನಡುವೆ ಪೈಪೋಟಿ ಏರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.