ADVERTISEMENT

UP Elections: ಏಳು ಶುಭ ಸಂಖ್ಯೆ ಪಕ್ಷಗಳ ನಂಬಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 18:35 IST
Last Updated 16 ಜನವರಿ 2022, 18:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಏಳು ಎಂಬುದು ಶುಭ ಸಂಖ್ಯೆ. ಇದುವೇ ತಮ್ಮ ಗೆಲುವಿಗೆ ಕಾರಣವಾಗುತ್ತದೆ ಎಂದು ಹಲವು ರಾಜಕಾರಣಿಗಳು ನಂಬಿದ್ದಾರೆ.

ಚುನಾವಣೆಯಲ್ಲಿ ತಾವು ಗೆಲ್ಲುತ್ತೇವೆ ಎಂಬುದನ್ನು ಸಮರ್ಥಿಸಲು ಅಭ್ಯರ್ಥಿಗಳು ಚಿತ್ರ ವಿಚಿತ್ರ ಕಾರಣಗಳನ್ನು ನೀಡುತ್ತಿದ್ದಾರೆ. ಸಪ್ತರ್ಷಿ ಮಂಡಲ ಇದೆ, ಸಂಗೀತದಲ್ಲಿ ಏಳು ಸ್ವರಗಳಿವೆ. ಹಾಗಾಗಿ, ಏಳು ಹಂತಗಳ ಮತದಾನದಲ್ಲಿ ತಾವು ಗೆಲ್ಲುತ್ತೇವೆ ಎನ್ನುತ್ತಿದ್ಧಾರೆ.

ಹ್ಯಾಟ್ರಿಕ್‌ ಗೆಲುವು ಬಿಜೆಪಿಯ ಗುರಿ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ಗೆ ಮರಳಿ ಅಧಿಕಾರ ಹಿಡಿಯುವ ಕನಸು– ಎಲ್ಲರೂ ಶುಭ ಸಂಖ್ಯೆ 7 ಅನ್ನು ನೆಚ್ಚಿಕೊಂಡಿದ್ದಾರೆ.

ADVERTISEMENT

‘ಸಪ್ತರ್ಷಿ ಮಂಡಲ ಇದೆ. ಮಳೆಬಿಲ್ಲಿನಲ್ಲಿ ಏಳು ಬಣ್ಣಗಳಿವೆ. ಶಾಸ್ತ್ರೀಯ ಸಂಗೀತದಲ್ಲಿ ಏಳು ಸ್ವರಗಳಿವೆ. 2017ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆಗಳೆರಡೂ ಏಳು ಹಂತಗಳಲ್ಲಿ ನಡೆದಿವೆ. ಈ ಎರಡರಲ್ಲೂ ಬಿಜೆಪಿ ಭಾರಿ ಅಂತರದಿಂದ ಗೆದ್ದಿದೆ. ಏಳು ಹಂತಗಳಲ್ಲಿ ನಡೆಯಲಿರುವ ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ’ ಎಂದು ಬಿಜೆಪಿಯ ರಾಜ್ಯ ಸಭಾ ಸದಸ್ಯ ಸಂಜಯ ಸೇಥ್ ಹೇಳಿದ್ದಾರೆ.

ಮತದಾನವು ರಾಜ್ಯದ ಪಶ್ಚಿಮದಲ್ಲಿ ಆರಂಭವಾಗಿ ಪೂರ್ವದತ್ತ ಸಾಗಲಿದೆ. ಇದು ಕೂಡ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂದು ಬಿಜೆಪಿ ವಕ್ತಾರ ಮನೀಶ್‌ ಶುಕ್ಲಾ ನಂಬಿದ್ದಾರೆ.

ಆದರೆ ಬಿಜೆಪಿಯದ್ದು ಮೋಸದ ರಾಜಕಾರಣ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ನ ವಕ್ತಾರ ಅಶೋಕ್‌ ಸಿಂಗ್‌ ಹೇಳಿದ್ಧಾರೆ. ‘2014ರ ನಂತರ ರಾಜ್ಯದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಮೋಸದ ರಾಜಕಾರಣ ಮಾಡಿದೆ. ಏಳು ಬಣ್ಣದ ಕನಸುಗಳ ಬಿಜೆಪಿಯ ಆಮಿಷಕ್ಕೆ ರಾಜ್ಯದ ಜನರು ಈ ಬಾರಿ ಬಲಿ ಬೀಳುವುದಿಲ್ಲ. ಬಿಜೆಪಿಯನ್ನು ಏಳು ಸಮುದ್ರದಾಚೆ ಎಸೆಯಲು ಜರು ನಿರ್ಧರಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಏಳು ಸಮುದ್ರಗಳನ್ನು ಸರಾಗವಾಗಿ ದಾಟ
ಲಿದೆ. ಸಪ್ತರ್ಷಿಗಳು ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಲಿದ್ದಾರೆ ಎಂದಿದ್ದಾರೆ.

‘ಏಳು ಹಂತಗಳ ಮತದಾನವು ಎಸ್‌ಪಿಗೆ ಈ ಬಾರಿ ಅದೃಷ್ಟದಾಯಕ ಎನಿಸಲಿದೆ. ಪಕ್ಷವು ಮಿತ್ರ ಪಕ್ಷಗಳ ಜತೆಗೂಡಿ ಸಂಗೀತದ ಏಳು ಸ್ವರಗಳ ಮೂಲಕ ಜನರಿಗೆ ಮೋಡಿ ಮಾಡಲಿದೆ. ಏಳು ಹಂತಗಳ ಮತದಾನದ ಕೊನೆಯ ಹಂತವು ಮಾರ್ಚ್‌ 7ರಂದೇ ನಡೆಯಲಿರುವುದು ಕೂಡ ಆಸಕ್ತಿದಾಯಕ’ ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸುರೇಂದ್ರ ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.