ADVERTISEMENT

UP Elections: ಅಖಿಲೇಶ್‌ ಪಾಳಯ ಸೇರಿದ ಬಿಜೆಪಿಯ ಮಾಜಿ ಸಚಿವ ದಾರಾ ಸಿಂಗ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 18:30 IST
Last Updated 16 ಜನವರಿ 2022, 18:30 IST
ಉತ್ತರ ಪ್ರದೇಶದ ಮಾಜಿ ಸಚಿವ ದಾರಾ ಸಿಂಗ್‌ ಅವರನ್ನು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಭಾನುವಾರ ಪಕ್ಷಕ್ಕೆ ಬರಮಾಡಿಕೊಂಡರು–ಪಿಟಿಐ ಚಿತ್ರ
ಉತ್ತರ ಪ್ರದೇಶದ ಮಾಜಿ ಸಚಿವ ದಾರಾ ಸಿಂಗ್‌ ಅವರನ್ನು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಭಾನುವಾರ ಪಕ್ಷಕ್ಕೆ ಬರಮಾಡಿಕೊಂಡರು–ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶ ಮಾಜಿ ಸಚಿವ, ಇತರ ಹಿಂದುಳಿದ ವರ್ಗಗಳ ಪ್ರಮುಖ ನಾಯಕ ದಾರಾ ಸಿಂಗ್ ಚೌಹಾಣ್‌ ಅವರು ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ)ಭಾನುವಾರ ಸೇರಿದರು.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸಂಪುಟಕ್ಕೆ ಅವರು ಬುಧವಾರವಷ್ಟೇ ರಾಜೀನಾಮೆ ನೀಡಿದ್ದರು.

ದಾರಾ ಸಿಂಗ್ ಅವರ ಜೊತೆಗೆ, ಹಿಂದುಳಿದ ವರ್ಗಗಳ ನಾಯಕ, ವಿಶ್ವನಾಥ್‌ಗಂಜ್‌ ವಿಧಾನಸಭೆ ಕ್ಷೇತ್ರದ ಅಪ್ನಾ ದಳ (ಸೋನೆಲಾಲ್) ಪಕ್ಷದ ಶಾಸಕ ಆರ್‌.ಕೆ. ವರ್ಮ ಕೂಡಾ ಎಸ್‌ಪಿಗೆ ಸೇರ್ಪಡೆ ಆದರು. ಅಪ್ನಾ ದಳ (ಸೋನೆಲಾಲ್‌) ಬಿಜೆಪಿಯ ಮಿತ್ರ ಪಕ್ಷವಾಗಿದೆ.

ADVERTISEMENT

ಎಸ್‌ಪಿ ಸೇರ್ಪಡೆ ವೇಳೆ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ದಾರಾ ಸಿಂಗ್‌, ‘ಉತ್ತರ ಪ್ರದೇಶದಲ್ಲಿ 2017ರಲ್ಲಿ ಸರ್ಕಾರ ರಚಿಸುವಾಗ ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ (ಎಲ್ಲರ ಜೊತೆ ಎಲ್ಲರ ವಿಕಾಸ) ಎಂಬ ಘೋಷಣೆಯನ್ನು ಬಿಜೆಪಿ ಮಾಡಿತ್ತು. ಆದರೆ ವಿಕಾಸ ಆಗಿದ್ದು ಬೆರಳೆಣಿಕೆಯಷ್ಟು ಜನರ ಬದುಕಿನಲ್ಲಿ ಮಾತ್ರ. ಉಳಿದವರ ಜೀವನವನ್ನು ಅವರವರ ಹಣೆಬರಹಕ್ಕೆ ಬಿಡಲಾಯಿತು’ ಎಂದರು.

ಎಸ್‌ಪಿಯನ್ನು ತನ್ನ ಹಳೆಯ ಮನೆ ಎಂದು ಅವರು ಕರೆದಿದ್ದಾರೆ. ‘ನಾವು ಉತ್ತರ ಪ್ರದೇಶ ರಾಜಕೀಯದಲ್ಲಿ ಬದಲಾವಣೆ ತರುತ್ತೇವೆ ಮತ್ತು ಅಖಿಲೇಶ್‌ ಯಾದವ್‌ರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ. ಇತರ ಹಿಂದುಳಿದ ವರ್ಗಗಳು ಮತ್ತು ದಲಿತರು ಒಟ್ಟಾಗುತ್ತಾರೆ. ನಮ್ಮ ಎದುರಾಳಿಗಳು ಶಕ್ತಿ ಮೀರಿ ಪ್ರಯತ್ನಿಸಬಹುದು, ಆದರೆ ಅವರಿಂದ ಈ ಚಂಡಮಾರುತವನ್ನು ತಡೆಯಲು ಸಾಧ್ಯವಿಲ್ಲ’ ಎಂದರು.

ಮೌ ಜಿಲ್ಲೆಯ ಮಧುಬನ್‌ ಕ್ಷೇತ್ರದ ಶಾಸಕರಾಗಿದ್ದ ಅವರು, ‘ದಲಿತರು, ಹಿಂದುಳಿದ ವರ್ಗದವರು ಮತ್ತು ನಿರುದ್ಯೋಗಿಗಳಿಗೆ ಬಿಜೆಪಿ ಸರ್ಕಾರದಿಂದ ನ್ಯಾಯ ಸಿಗಲಿಲ್ಲ. ಬಡವರು ಈ ಸರ್ಕಾರವನ್ನು ರಚಿಸಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಸರ್ಕಾರದ ಉಪಯೋಗವನ್ನು ಇತರರು ಪಡೆದರು. ಬಿಜೆಪಿ ಸರ್ಕಾರಕ್ಕೆ ದಲಿತರು, ಹಿಂದುಳಿದವರಿಗಿಂತ ಜಾನುವಾರುಗಳೇ ಮುಖ್ಯವಾಗಿದ್ದವು’. ಎಂದು ಆರೋಪಿಸಿದರು.

ದಾರಾ ಸಿಂಗ್‌ ಮತ್ತು ವರ್ಮ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌, ‘ಎಸ್‌ಪಿ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಿದೆ’ ಎಂದರು.

2017ರಲ್ಲಿ ಬಿಜೆಪಿ ಟಿಕೆಟ್‌ನಿಂದ ಶಾಸಕರಾಗಿ ಆಯ್ಕೆ ಆಗುವ ಮೊದಲು ದಾರಾ ಸಿಂಗ್‌ ಅವರು 2009 ಮತ್ತು 2014ರಲ್ಲಿ ಬಹುಜನ ಸಮಾಜ ಪಕ್ಷದ ಟಿಕೆಟ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2009ರ ಚುನಾವಣೆಯಲ್ಲಿ ಗೆದ್ದರೆ, 2014ರಲ್ಲಿ ಸೋಲು ಕಂಡಿದ್ದರು.

ಆಜಂಗಡ, ಮೌ, ಗಾಜಿಪುರ ಮತ್ತು ಬಲಿಯಾ ಜಿಲ್ಲೆಗಳನ್ನು ಒಳಗೊಂಡ ಪೂರ್ವಾಂಚಲ ಪ್ರದೇಶದಲ್ಲಿ ಚೌಹಾಣ್‌ ಅವರು ಪ್ರಭಾವಿ ಎನ್ನಲಾಗಿದೆ.

ಎಸ್‌ಪಿಗೆ ಶನಿವಾರ ಸೇರ್ಪಡೆ ಆದ ಮತ್ತೊಬ್ಬ ಮಾಜಿ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಕೂಡಾ, ಬಿಜೆಪಿ ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದರು.

ಈವರೆಗೂ ಬಿಜೆಪಿಯ ಮೂರು ಸಚಿವರು ಮತ್ತು ಎಂಟು ಶಾಸಕರು ಎಸ್‌ಪಿ ಸೇರಿದ್ದಾರೆ. ಅವರಲ್ಲಿ ಬಹುತೇಕರು ಹಿಂದುಳಿದ ವರ್ಗದ ನಾಯಕರು.ಬಿಜೆಪಿ ಬಿಟ್ಟು ಬರುವ ಇನ್ನಷ್ಟು ಮುಖಂಡರನ್ನು ಎಸ್‌ಪಿಗೆ ಸೇರಿಸುವುದಿಲ್ಲ ಎಂದು ಅಖಿಲೇಶ್‌ ಯಾದವ್ ಅವರು ಶನಿವಾರವಷ್ಟೇ ಹೇಳಿದ್ದರು.

ಅಪರಾಧ ಹಿನ್ನೆಲೆಯವರಿಗೆ ಎಸ್‌ಪಿ ಟಿಕೆಟ್‌: ಯೋಗಿ ಆರೋಪ

‘ಸಮಾಜವಾದಿ ಪಕ್ಷವು ಅಪರಾಧ ಹಿನ್ನೆಲೆಯವರಿಗೆ ಟಿಕೆಟ್‌ ನೀಡಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಟೀಕಿಸಿದ್ದಾರೆ.

ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಬಿಜೆಪಿ ನಿನ್ನೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಮಾಜದ ಎಲ್ಲಾ ವರ್ಗಗಳಿಗೂ ಆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ನಮ್ಮ ಪಟ್ಟಿಯು ಸಾಮಾಜಿಕ ನ್ಯಾಯವನ್ನು ಪ್ರತಿಬಿಂಬಿಸುತ್ತದೆ. ಎಲ್ಲರ ಜತೆ, ಎಲ್ಲರ ವಿಕಾಸ ಎಂಬುದನ್ನೂ ಆ ಪಟ್ಟಿಯು ತೋರಿಸುತ್ತದೆ’ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.

‘ಆದರೆ ಸಮಾಜವಾದಿ ಪಕ್ಷ ಮತ್ತು ಅದ ಮಿತ್ರ ಪಕ್ಷಗಳ ಪಟ್ಟಿಯನ್ನು ಗಮನಿಸಿದ್ದೀರಾ? ಕೈರಾನಾದಲ್ಲಿ ಹಿಂದೂಗಳ ವಲಸೆಗೆ ಕಾರಣರಾದವರು ಮತ್ತು ಮುಜಫ್ಫರ್‌ನಗರ ಗಲಭೆಗೆ ಕಾರಣರಾದವರಿಗೆ ಟಿಕೆಟ್ ನೀಡಲಾಗಿದೆ. ಲೋನಿಯಲ್ಲಿ ರೌಡಿ ಶೀಟರ್‌ಗೆ ಟಿಕೆಟ್ ನೀಡಲಾಗಿದೆ. ಅವರು, ಅಪರಾಧಿಗಳಿಗೆ ಟಿಕೆಟ್ ನೀಡುವ ಮೂಲಕ ಸರ್ಕಾರವನ್ನು ವಸೂಲಿಬಾಜಿಯ ಮಾಧ್ಯಮವ
ನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. ಇದು ಅವರ ಸಾಮಾಜಿಕ ನ್ಯಾಯ’ ಎಂದು ಅವರು ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.