ADVERTISEMENT

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮರಳಿ ಅಧಿಕಾರ, ಎಸ್‌ಪಿಗೂ ಹೆಚ್ಚು ಸ್ಥಾನ: ಸಮೀಕ್ಷೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2022, 12:36 IST
Last Updated 24 ಜನವರಿ 2022, 12:36 IST
ಸಾಂದರ್ಭಿಕ ಚಿತ್ರ – ಪಿಟಿಐ
ಸಾಂದರ್ಭಿಕ ಚಿತ್ರ – ಪಿಟಿಐ   

ಲಖನೌ: ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಏರತೊಡಗಿರುವ ಮಧ್ಯೆಯೇ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಸಮಾಜವಾದಿ ಪಕ್ಷ (ಎಸ್‌ಪಿ) ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷಾ ವರದಿಗಳು ಹೇಳಿವೆ.

403 ಸಂಖ್ಯಾಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯು 230 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಲಿದೆ. ಸಮಾಜವಾದಿ ಪಕ್ಷವು ಸುಮಾರು 150 ಸ್ಥಾನ ಗಳಿಸಲಿದೆ ಎಂದು ಸಮೀಕ್ಷಾ ವರದಿಗಳು ಹೇಳಿವೆ.

ಅತಿಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ರಾಜ್ಯವಾದ ಕಾರಣ ಉತ್ತರ ಪ್ರದೇಶವನ್ನು ಗೆಲ್ಲುವುದು ಬಿಜೆಪಿಯ ಪ್ರಮುಖ ಗುರಿಯೂ ಆಗಿದೆ.

ಸಮಾಜವಾದಿ ಪಕ್ಷವು ಈ ಬಾರಿ 150ರಷ್ಟು ಸ್ಥಾನ ಗಳಿಸಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ ಆಡಳಿತ ವಿರೋಧಿ ಅಲೆಯೇ ಈ ಪಕ್ಷದ ಸಂಖ್ಯಾಬಲ ಹೆಚ್ಚಾಗಲು ಕಾರಣ. 2014ರ ಚುನಾವಣೆಯಲ್ಲಿ ಬಿಜೆಪಿ ಪರವಾಗಿದ್ದ ಯಾದವೇತರ ಒಬಿಸಿ ಮತದಾರರನ್ನು ತಲುಪುವಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಯಶಸ್ವಿಯಾಗಿದ್ದಾರೆ. ಅಲ್ಲದೆ, ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್‌ಪಿಗಳ ಪ್ರಭಾವಿ ನಾಯಕರನ್ನು ಎಸ್‌ಪಿ ಈ ಬಾರಿ ತನ್ನತ್ತ ಸೆಳೆದುಕೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಕಾಂಗ್ರೆಸ್‌ಗೆ ಈ ಬಾರಿಯೂ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗಲಾರದು ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 3–5 ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 8–16 ಸ್ಥಾನಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.