ADVERTISEMENT

8 ಪೊಲೀಸರ ಹತ್ಯೆ ಪ್ರಕರಣ: ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಪತ್ನಿ, ಮಗನ ಬಂಧನ

ಏಜೆನ್ಸೀಸ್
Published 10 ಜುಲೈ 2020, 5:48 IST
Last Updated 10 ಜುಲೈ 2020, 5:48 IST
ಲಖನೌನಲ್ಲಿರುವ ವಿಕಾಸ್‌ ದುಬೆ ನಿವಾಸ (ಪಿಟಿಐ ಚಿತ್ರ)
ಲಖನೌನಲ್ಲಿರುವ ವಿಕಾಸ್‌ ದುಬೆ ನಿವಾಸ (ಪಿಟಿಐ ಚಿತ್ರ)   

ಲಖನೌ:ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆಯನ್ನುಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದ ಕೆಲವೇ ಗಂಟೆಗಳಲ್ಲಿ ಆತನ ಪತ್ನಿ, ಮಗ ಹಾಗೂ ಸಹಚರನೊಬ್ಬನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಗುರುವಾರ ಸಂಜೆ ಬಂಧಿಸಿದೆ.

ಕೃಷ್ಟನಗರದಲ್ಲಿರುವ ತಮ್ಮ ನಿವಾಸದಲ್ಲಿ ದುಬೆಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಪತ್ನಿ ರಿಚಾ ದುಬೆಯನ್ನು ಬಂಧಿಸಲಾಗಿದೆ. ಇದೇ ವೇಳೆ ಆತನ ಪುತ್ರ ಮತ್ತು ಒಬ್ಬ ಸಹಚರನನ್ನೂ ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದುಬೆ ನಡೆಸುತ್ತಿದ್ದ ಕಾನೂನುಬಾಹಿರ ಚಟುವಟಿಕೆಗಳಿಗೆ ರಿಚಾ ಬೆಂಬಲ ನೀಡುತ್ತಿದ್ದರು ಎನ್ನಲಾಗಿದ್ದು,ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮದಲ್ಲಿ ಜುಲೈ 3ರಂದು ನಡದ 8 ಪೊಲೀಸರ ಹತ್ಯೆ ಪ್ರಕರಣದ ಸಂಚು ರೂಪಿಸುವಲ್ಲಿ ರಿಚಾಳ ಪಾತ್ರವೂ ಇದೆ ಎಂದುಆರೋಪಿಸಲಾಗಿದೆ.

ADVERTISEMENT

ಬಿಕ್ರುವಿನಲ್ಲಿಸದ್ಯ ನೆಲಸಮಗೊಳಿಸಲಾಗಿರುವ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ತನ್ನ ಮೊಬೈಲ್‌ಗೆ ಕನೆಕ್ಟ್‌ ಮಾಡಿಕೊಂಡಿದ್ದ ರಿಚಾ, ತಾನು ಇದ್ದಲ್ಲಿಂದಲೇ ಅಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದಳು ಎನ್ನಲಾಗಿದೆ.

ಪೊಲೀಸರ ಹತ್ಯೆ ಪ್ರಕರಣದ ಬಳಿಕ ಆಕೆ ನಾಪತ್ತೆಯಾಗಿದ್ದಳು.

ರಿಚಾಳನ್ನು ಕಾನ್ಪುರಕ್ಕೆ ಕರೆದೊಯ್ದು ವಿಕಾಸ್‌ ದುಬೆಯೊಂದಿಗೆ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದರು.

ದುಬೆಯನ್ನುಉಜ್ಜಯನಿಯಲ್ಲಿ ಬಂಧಿಸಿದ್ದಮಧ್ಯಪ್ರದೇಶ ಪೊಲೀಸರುಆತನನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದರು. ಆತನನ್ನು ಇಂದು ಕಾನ್ಪುರಕ್ಕೆ ಕರೆತರುವ ವೇಳೆ ಬೆಂಗಾವಲು ವಾಹನ ಮಗುಚಿತ್ತು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ದುಬೆ, ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.