ಲಖನೌ: ಉತ್ತರ ಪ್ರದೇಶದ ವಿವಿಧೆಡೆ ಮಂಗಳವಾರ ಸಂಭವಿಸಿದ ಗುಡುಗು–ಮಿಂಚಿನ ಹೊಡೆತ ಹಾಗೂ ವ್ಯಾಪಕ ಮಳೆಯಿಂದ ಮನೆಗಳು ಕುಸಿದು 16 ಮಂದಿ ಮೃತಪಟ್ಟಿದ್ದಾರೆ.
ಭಾರಿ ಮಳೆಯಿಂದ ಮೀರಠ್, ಮೊರಾದಾಬಾದ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮನೆಗಳು ಕುಸಿದು ಆರು ಮಂದಿ ಮೃತಪಟ್ಟಿರುವುದು ವರದಿಯಾಗಿದೆ.
ಮಿರ್ಜಾಪುರ, ಪ್ರಯಾಗ್‌ರಾಜ್, ಪ್ರತಾಪಗಢ, ಗೊಂಡಾ ಜಿಲ್ಲೆಗಳಲ್ಲಿ ಮಿಂಚಿನ ಹೊಡೆತದಿಂದ 10 ಮಂದಿ ಮೃತಪಟ್ಟಿದ್ದಾರೆ.
ಮಳೆಯಿಂದ ಹಲವೆಡೆ ವಿದ್ಯುತ್ ಕಂಬಗಳು ಬಿದ್ದು, ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ಮರಗಳು ಬುಡ ಸಮೇತ ಕುಸಿದುಬಿದ್ದಿದ್ದು, ಕೆಲವೆಡೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮಳೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸು ಪಡೆದುಕೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿಯು ಸಂತ್ರಸ್ತರಿಗೆ ನೆರವು ಒದಗಿಸಿದ್ದಾರೆ.
ಶಿಮ್ಲಾ ವರದಿ: ಹಿಮಾಚಲ ಪ್ರದೇಶದಲ್ಲಿ ಮಂಗಳವಾರವೂ ಭಾರಿ ಮಳೆ ಮುಂದುವರಿದಿದ್ದು, ಆರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 1,311 ರಸ್ತೆಗಳಲ್ಲಿ ವಾಹನಗಳ ಸಂಚಾರ, ರಾಜ್ಯದಾದ್ಯಂತ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶಾಲಾ– ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.
1,305 ರಸ್ತೆಗಳ ಪೈಕಿ ಮಂಡಿ ಜಿಲ್ಲೆಯಲ್ಲಿ 289, ಶಿಮ್ಲಾದಲ್ಲಿ 241, ಛಂಬಾದಲ್ಲಿ 239, ಕುಲ್ಲುವಿನಲ್ಲಿ 169 ಹಾಗೂ ಸಿರ್‌ಮೌರ್ ಜಿಲ್ಲೆಯ 127 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸೋಲಾನ್ ಜಿಲ್ಲೆಯ ಸನ್ವಾರಾದಲ್ಲಿ ಸಂಭವಿಸಿದ ಭೂಕುಸಿತದಿಂದ ಶಿಮ್ಲಾದಿಂದ ಕಲ್ಕಾ ಸಂಪರ್ಕಿಸುವ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
ಮಳೆ–ವಿವಿಧ ರಾಜ್ಯಗಳಲ್ಲಿ ಹಾನಿಯ ವಿವರ....
*ಸೆ.5ರವರೆಗೆ ಶಿಮ್ಲಾ– ಕಲ್ಕಾ ನಡುವೆ ರೈಲು ಸಂಚಾರ ಸ್ಥಗಿತ
*ಸಂಪರ್ಕ ರಸ್ತೆಗಳು ಬಂದ್– ಮಾರುಕಟ್ಟೆಯಲ್ಲಿ ಸೇಬು ರವಾನಿಸಲು ಸಂಕಷ್ಟ
*ಮುಂಗಾರು: ಹಿಮಾಚಲ ಪ್ರದೇಶದಲ್ಲಿ ಇದುವರೆಗೆ 327 ಮಂದಿ ಬಲಿ–3,158 ಕೋಟಿ ನಷ್ಟ
*ಉಕ್ಕಿ ಹರಿಯುತ್ತಿರುವ ಯಮುನಾ ನದಿ–ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಂದ ಪರಿಶೀಲನೆ
*ಪಂಜಾಬ್‌ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆಮ್ ಆದ್ಮಿ ಪಕ್ಷದ ಶಾಸಕರು, ಸಂಸದರ ಒಂದು ತಿಂಗಳ ವೇತನ ದೇಣಿಗೆ
*ರಾಜ್ಯಕ್ಕೆ ಬಾಕಿ ಉಳಿಸಿರುವ ₹60 ಸಾವಿರ ಕೋಟಿ ಬಿಡುಗಡೆಗೊಳಿಸಿ– ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಗ್ರಹ
* ಜಮ್ಮು–ಕಾಶ್ಮೀರದ ದೋಡಾ– ಕಿಶ್ತ್ವಾರ್ ಸಂಪರ್ಕಿಸುವ ಬೈಲಿ ಸೇತುವೆ ಮರುನಿರ್ಮಿಸಿದ ಸೇನೆ
*ಹರಿಯಾಣದಲ್ಲಿಯೂ ನಿರಂತರ ಮಳೆ– ಗುರುಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.