ADVERTISEMENT

ಉತ್ತರ ಪ್ರದೇಶ ಚುನಾವಣೆ: ವಿಪಕ್ಷಗಳಿಗೆ ಅಸ್ತ್ರವಾದ ಲಖಿಂಪುರ ಖೇರಿ ಪ್ರಕರಣ

ಪಿಟಿಐ
Published 27 ಡಿಸೆಂಬರ್ 2021, 1:41 IST
Last Updated 27 ಡಿಸೆಂಬರ್ 2021, 1:41 IST
ಲಖಿಂಪುರ ಖೇರಿ ಪ್ರಕರಣದ ವಿರುದ್ಧ ಪ್ರತಿಪಕ್ಷಗಳ ಹೋರಾಟ
ಲಖಿಂಪುರ ಖೇರಿ ಪ್ರಕರಣದ ವಿರುದ್ಧ ಪ್ರತಿಪಕ್ಷಗಳ ಹೋರಾಟ    

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವ ಈ ಸಮಯದಲ್ಲಿ, ಕೋವಿಡ್‌–19 ಎರಡನೇ ಅಲೆಯಲ್ಲಿ ಗಂಗಾ ನದಿಯಲ್ಲಿ ಮೃತದೇಹಗಳು ತೇಲಿದ್ದು, ಲಖಿಂಪುರ್‌ ಖೇರಿಯಲ್ಲಿ ರೈತರ ಮೇಲೆ ಎಸ್‌ಯುವಿ ಹರಿದದ್ದು, ಭಾರಿ ಸುದ್ದಿಯಾದ ಅಪರಾಧ ಪ್ರಕರಣಗಳು ವಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ದೊಡ್ಡ ಯೋಜನೆಗಳಿಗೆ ಚಾಲನೆ ನೀಡಿರುವುದು ಮತ್ತು ಕಳೆದ ಸರ್ಕಾರಗಳು ರಾಜ್ಯವನ್ನು ನಿರ್ಲಕ್ಷಿಸಿದ್ದವು ಎಂದು ಆರೋಪಿಸುವುದೂ ನಡೆದಿದೆ. ಎಲ್ಲಾ ಪಕ್ಷಗಳ ಪ್ರಚಾರ ರ‍್ಯಾಲಿಗಳಲ್ಲೂ ಜನರು ಕಿಕ್ಕಿರಿದು ಸೇರುತ್ತಿದ್ದಾರೆ. ಕೋವಿಡ್‌–19ರ ಮೂರನೇ ಅಲೆಯ ಭೀತಿ ಇದ್ದರೂ ರ‍್ಯಾಲಿಗಳಲ್ಲಿ ಕೋವಿಡ್‌ ಸಂಬಂಧಿ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿಲ್ಲ.

ಕೋವಿಡ್‌ ಎರಡನೇ ಅಲೆ: ಕೋವಿಡ್‌ ಎರಡನೇ ಅಲೆ ನಿರ್ವಹಿಸುವುದರಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂತು. ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗಾಗಿ ಜನರು ಪಟ್ಟ ಪಡಿಪಾಟಲು ವಿಪರೀತವಾಗಿತ್ತು, ಚಿತಾಗಾರಗಳ ಎದುರು ಮೃತದೇಹಗಳು ಸಾಲುಗಟ್ಟಿದ್ದವು. ಗಂಗಾ ನದಿಯಲ್ಲಿ ಮೃತದೇಹಗಳು ತೇಲಿದವು. ಕೆಲ ಬಿಜೆಪಿ ನಾಯಕರೇ ಅವರ ಸರ್ಕಾರವನ್ನು ಟೀಕಿಸಿದರು. ಇದೆಲ್ಲದರಿಂದಾಗಿಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವರ್ಚಸ್ಸಿಗೆ ಧಕ್ಕೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಕೊರೊನಾ ಸೋಂಕಿನ ಅಲೆ ನಿಧಾನವಾಗಿ ತಗ್ಗುತ್ತಿದ್ದ ವೇಳೆ ಉತ್ತರ ಪ್ರದೇಶದ ಪಂಚಾಯಿತಿ ಚುನಾವಣೆಗಳು ನಡೆದವು. ಶಿಕ್ಷಕರೂ ಸೇರಿ ಇತರ ಸರ್ಕಾರಿ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರಲ್ಲಿ ಹಲವರು ಕೋವಿಡ್‌ನಿಂದ ಮೃತಪಟ್ಟರು.

ಲಖಿಂಪುರ ಖೇರಿ ಪ್ರಕರಣ: ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಒಂದು ವರ್ಷಗಳ ಕಾಲ ನಡೆಸಿದ್ದ ಹೋರಾಟದಲ್ಲಿ ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರುಪಾಲ್ಗೊಂಡು ಹೋರಾಟಕ್ಕೆ ಬಲ ತುಂಬಿದರು.

ಅದೇ ವೇಳೆ, ಲಖಿಂಪುರ ಖೇರಿಯಲ್ಲಿ ಪ್ರತಿಭಟನೆನಿರತ ರೈತರ ಮೇಲೆ ಎಸ್‌ಯುವಿಯನ್ನು ಹರಿಸಲಾಗಿತ್ತು. ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರನ್ನು ಈ ವಾಹನ ಚಾಲನೆ ಮಾಡಿದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಕಾರಣ ಅಜಯ್‌ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ.

ಅದಲ್ಲದೇ, ಸಮಾಜವಾದಿ ಪಕ್ಷವು ಹಲವಾರು ಸ್ಥಳೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದೆ. ಇದು ಕೂಡಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಪರ್ಧೆ ಒಡ್ಡಲಿದೆ ಎನ್ನಲಾಗಿದೆ. ಗೋರಖಪುರದಲ್ಲಿ ಉದ್ಯಮಿಯೊಬ್ಬರು ಮೃತಪಟ್ಟ ಪ್ರಕರಣ ಸೇರಿ ಹಲವಾರು ಅಪರಾಧ ಪ್ರಕರಣಗಳು ಈಗ ಮುನ್ನೆಲೆಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.