ADVERTISEMENT

ಉತ್ತರ ಪ್ರದೇಶ| ದಲಿತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ: ಪ್ರಕರಣ ದಾಖಲು

ಐಎಎನ್ಎಸ್
Published 27 ಸೆಪ್ಟೆಂಬರ್ 2022, 2:52 IST
Last Updated 27 ಸೆಪ್ಟೆಂಬರ್ 2022, 2:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಖನೌ: ಉತ್ತರ ಪ್ರದೇಶದ ಔರೈಯ ಜಿಲ್ಲೆಯ ಶಾಲೆಯೊಂದರ ಶಿಕ್ಷಕರೊಬ್ಬರು ದಲಿತ ವಿದ್ಯಾರ್ಥಿ ಮೇಲೆ ತೀವ್ರ ಹಲ್ಲೆ ಮಾಡಿದ್ದು, ಆಂತರಿಕ ಗಾಯಗಳಿಂದಾಗಿ ಆತ ಮೃತಪಟ್ಟಿದ್ದಾನೆ. ಹೀಗಾಗಿ ಶಿಕ್ಷಕನನ್ನು ಅಮಾನತುಗೊಳಿಸಿ, ಪ್ರಕರಣ ದಾಖಲಿಸಲಾಗಿದೆ.

ಪರೀಕ್ಷೆಯಲ್ಲಿ ತಪ್ಪು ಮಾಡಿದ್ದ ಎಂಬ ಕಾರಣಕ್ಕೆ ಸೆಪ್ಟೆಂಬರ್ 13 ರಂದು 10 ನೇ ತರಗತಿಯ ವಿದ್ಯಾರ್ಥಿ ನಿಖಿತ್‌ ಕುಮಾರ್‌ ಮೇಲೆ ಶಿಕ್ಷಕ ತೀವ್ರವಾಗಿ ಹಲ್ಲೆ ಮಾಡಿದ್ದರು. ಸೋಮವಾರ ಚಿಕಿತ್ಸೆಗಾಗಿ ಇಟಾವಾದ ಸೈಫೈನಲ್ಲಿರುವ ಉತ್ತರ ಪ್ರದೇಶ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸ್ಥಳಾಂತರಿಸುವಾಗ ವಿದ್ಯಾರ್ಥಿ ಆಂಬ್ಯುಲೆನ್ಸ್‌ನಲ್ಲಿ ಮೃತಪಟ್ಟಿದ್ದಾನೆ.

ಆರೋಪಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ.

ADVERTISEMENT

ಮೃತ ವಿದ್ಯಾರ್ಥಿ ನಿಖಿತ್‌ ಕುಮಾರ್‌ ಔರೈಯ ವೈಶೋಲಿ ಗ್ರಾಮದವನಾಗಿದ್ದು, ಅಚಲ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಫಾನ್‌ಫುಡ್ ರಸ್ತೆಯಲ್ಲಿರುವ ಆದರ್ಶ ಇಂಟರ್ ಕಾಲೇಜು ಸಂಸ್ಥೆಯ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಮೃತ ವಿದ್ಯಾರ್ಥಿ ತಂದೆ ರಾಜು ದೋಹ್ರೆ ಮಾತನಾಡಿ, ‘ಸೆಪ್ಟೆಂಬರ್ 13 ರಂದು ಸಮಾಜ ವಿಜ್ಞಾನ ಶಿಕ್ಷಕ ಅಶ್ವನಿ ಸಿಂಗ್ ಅವರು ತರಗತಿ ಪರೀಕ್ಷೆಯನ್ನು ನಡೆಸಿದ್ದರು. ನನ್ನ ಮಗ ಒಎಂಆರ್‌ ಪ್ರತಿಯಲ್ಲಿ ಒಂದರ ಬದಲು ಎರಡು ಕಡೆ ಕಪ್ಪು ಬಣ್ಣದಲ್ಲಿ ಗುರುತು ಮಾಡಿದ್ದ. 'ಸಮಾಜಿಕ್' (ಸಾಮಾಜಿಕ) ಬದಲಿಗೆ 'ಸಮಾಜಕ್' ಎಂದು ಬರೆದಿದ್ದ. ಇದರಿಂದ ಕೆರಳಿರುವ ಅಶ್ವನಿ ಸಿಂಗ್, ನನ್ನ ಮಗನ ತಲೆಗೂದಲು ಹಿಡಿದು ನಿಷ್ಕರುಣೆಯಿಂದ ಥಳಿಸಿದ್ದಾರೆ. ಮೂರ್ಚೆ ತಪ್ಪಿ ನೆಲದ ಮೇಲೆ ಬೀಳುವವರೆಗೆ ಹೊಡೆದಿದ್ದಾರೆ’ ಎಂದು ಹೇಳಿದ್ದಾರೆ.

‘ಸೋಮವಾರ ಅವನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದೆವು. ದಾರಿ ಮಧ್ಯೆ ಅವನಿಗೆ ಪ್ರಜ್ಞೆ ಬಂದಿತ್ತಾದರೂ, ಉಸಿರಾಟದ ತೊಂದರೆ ಇತ್ತು. ಆತನಿಗೆ ಆಂತರಿಕ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದರು. ಈ ಮಧ್ಯೆ, ಅವನಿಗೆ ಹಲವು ಕಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ಸೋಮವಾರ, ಸೈಫೈಗೆ ಕರೆದೊಯ್ಯುವಾಗ ಆಂಬ್ಯುಲೆನ್ಸ್‌ನಲ್ಲಿ ಸಾವಿಗೀಡಾದ’ ಎಂದು ಅವರು ಹೇಳಿದರು.

‘ಥಳಿತದ ವಿಷಯ ತಿಳಿದ ನಾವು ಶಾಲೆಗೆ ಹೋಗಿದ್ದೆವು. ನಮಗೆ ಶಿಕ್ಷಕರು ಬೆದರಿಕೆ ಹಾಕಿದರು. ನಂತರ ನಾವು ಪ್ರತಿಭಟನೆ ನಡೆಸಿದಾಗ ಕಾಲೇಜು ಪ್ರಾಂಶುಪಾಲರು ಮಧ್ಯ ಪ್ರವೇಶಿಸಿ, ವಿದ್ಯಾರ್ಥಿಯ ಆಸ್ಪತ್ರೆಯ ಖರ್ಚನ್ನು ಶಿಕ್ಷಕ ಅಶ್ವನಿ ನೋಡಿಕೊಳ್ಳುತ್ತಾರೆ ಎಂದು ಭರವಸೆ ನೀಡಿದರು. ಮಗನನ್ನು ಇಟಾವಾದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ₹40,000 ವೆಚ್ಚವನ್ನು ಶಿಕ್ಷಕರು ಭರಿಸಿದ್ದಾರೆ’ ಎಂದು ರಾಜು ಹೇಳಿದರು.

‘ಘಟನೆ ಬಗ್ಗೆ ಮಾತನಾಡುವಾಗ ಶಿಕ್ಷಕ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಜಾತಿ ನಿಂದನೆ ಮಾಡಿದ್ದರು. ನಂತರ ನಾವು ಪೊಲೀಸ್ ಠಾಣೆಗೆ ಹೋಗಿ ಅವರ ವಿರುದ್ಧ ಸೆಪ್ಟೆಂಬರ್ 24 ರಂದು ದೂರು ದಾಖಲಿಸಿದ್ದೇವೆ. ನಂತರ ನಾವು ಮಗನನ್ನು ಮನೆಗೆ ಕರೆತಂದಿದ್ದೇವೆ. ಆದರೆ ಅವನ ಸ್ಥಿತಿಯನ್ನು ನೋಡಿದ ಪೊಲೀಸರು ಚಿಕಿತ್ಸೆಗಾಗಿ ಸೋಮವಾರ ಸೈಫೈಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಆತ ದಾರಿಯಲ್ಲಿ ಕೊನೆಯುಸಿರೆಳೆದ‘ ಎಂದು ಅವರು ಹೇಳಿದ್ದಾರೆ.

ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಔರೈಯ ಪೊಲೀಸ್ ವರಿಷ್ಠಾಧಿಕಾರಿ ಚಾರು ನಿಗಮ್ ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಶಿಕ್ಷಕನ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಔರೈಯ ಜಿಲ್ಲಾ ಶಾಲೆಗಳ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮಾಳವಿಯಾ ಮಾತನಾಡಿ, ಶಿಕ್ಷಕನ್ನು ಅಮಾನತುಗೊಳಿಸಲು ಕಾಲೇಜು ವ್ಯವಸ್ಥಾಪಕರಿಗೆ ಆದೇಶ ನೀಡಲಾಗಿದೆ ಎಂದರು.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.