ADVERTISEMENT

ಉತ್ತರ ಪ್ರದೇಶ, ಮಣಿಪುರ ವಿಧಾನಸಭೆಯಲ್ಲಿ 55 ವರ್ಷ ಮೇಲ್ಪಟ್ಟ ಶಾಸಕರ ಸಂಖ್ಯೆ ಏರಿಕೆ

ಪಿಟಿಐ
Published 13 ಮಾರ್ಚ್ 2022, 11:04 IST
Last Updated 13 ಮಾರ್ಚ್ 2022, 11:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ 55 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇತ್ತೀಚೆಗಷ್ಟೇ ಪ್ರಕಟಗೊಂಡಿದ್ದು, ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ವಿಜಯ ಪತಾಕೆ ಹಾರಿಸಿದೆ.

ಪಿಆರ್‌ಎಸ್‌ ವಿಶ್ಲೇಷಣೆಯ ಪ್ರಕಾರ, 55 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಶಾಸಕರ ಪ್ರಮಾಣ 2017ರಲ್ಲಿ ಶೇ 64.7 ರಷ್ಟಿತ್ತು. 2022ರಲ್ಲಿ ಇದರ ಪ್ರಮಾಣ ಶೇ 59.5 ಕ್ಕೆ ಇಳಿದಿದೆ.

ADVERTISEMENT

ಈ ಬಾರಿ ವಿಧಾನಸಭೆಗೆ ಆಯ್ಕೆಯಾದ ಶಾಸಕಿಯರ ಸಂಖ್ಯೆ ಏರಿಕೆ ಕಂಡಿದೆ ಎಂದು ವರದಿಯಾಗಿದೆ.

2017ರಲ್ಲಿ ಉತ್ತರಪ್ರದೇಶ ವಿಧಾನಸಭೆಯಲ್ಲಿ 42 ಮಂದಿ ಶಾಸಕಿಯರು ಇದ್ದರು. ಆದರೆ, ಈ ಬಾರಿ ಶಾಸಕಿಯರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

2017ರಲ್ಲಿ ಉತ್ತರಾಖಂಡ ವಿಧಾನಸಭೆಯಲ್ಲಿ 5 ಶಾಸಕಿಯರು ಇದ್ದರು. ಆದರೆ, ಈ ಬಾರಿ ಶಾಸಕಿಯರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇತ್ತ ಮಣಿಪುರ ವಿಧಾನಸಭೆಯಲ್ಲಿ ಶಾಸಕಿಯರ ಸಂಖ್ಯೆ 2ರಿಂದ 4ಕ್ಕೆ ಏರಿಕೆಯಾಗಿದೆ.

70 ಸದಸ್ಯರ ಉತ್ತರಾಖಂಡ ವಿಧಾನಸಭೆಯಲ್ಲಿ 55 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಶಾಸಕರ ಪ್ರಮಾಣವು 2017ರಲ್ಲಿ ಶೇ 61 ರಷ್ಟಿತ್ತು. ಈಗ (2022) ಶೇ 51 ಕ್ಕೆ ಇಳಿಕೆ ಕಂಡಿದೆ.

ಮಣಿಪುರದಲ್ಲಿಯೂ ಸಹ 55 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಶಾಸಕರ ಪ್ರಮಾಣ 2017ರಲ್ಲಿ ಶೇ 71.7ರಷ್ಟಿತ್ತು, ಈಗ (2022) ಶೇ 55ಕ್ಕೆ ಇಳಿದಿದೆ.

ಉತ್ತರ ಪ್ರದೇಶದಲ್ಲಿ ಕನಿಷ್ಠ ಪದವಿ ಹೊಂದಿರುವ ಶಾಸಕರ ಸಂಖ್ಯೆ 2017ರಲ್ಲಿ ಶೇ 72.7 ರಷ್ಟಿತ್ತು. ಈಗ ಇದರ ಪ್ರಮಾಣ ಶೇ 75.9ಕ್ಕೆ ಏರಿಕೆಯಾಗಿದೆ.

ಉತ್ತರಾಖಂಡದಲ್ಲಿ ಕನಿಷ್ಠ ಪದವಿ ಹೊಂದಿರುವ ಶಾಸಕರ ಸಂಖ್ಯೆ 2017ರಲ್ಲಿ ಶೇ 77 ರಷ್ಟಿತ್ತು. ಈಗ ಶೇ 68ಕ್ಕೆ ಇಳಿಕೆಯಾಗಿದೆ.

ಈ ಬಾರಿ ಮಣಿಪುರ ವಿಧಾನಸಭೆಗೆ ಆಯ್ಕೆಯಾದ ಶೇ 76.6ರಷ್ಟು ಶಾಸಕರು ಕನಿಷ್ಠ ಪದವಿಯನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.