ADVERTISEMENT

ಉತ್ತರ ಪ್ರದೇಶ:ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್‌ ಚಿಂತನೆ

2019ರ ಲೋಕಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 19:30 IST
Last Updated 7 ಅಕ್ಟೋಬರ್ 2018, 19:30 IST
ಉತ್ತರ ಪ್ರದೇಶ
ಉತ್ತರ ಪ್ರದೇಶ   

ಲಖನೌ: ಮಧ್ಯ ಪ್ರದೇಶದಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಹಾಗೂ ಸಮಾಜವಾದಿ ಪಾರ್ಟಿ (ಎಸ್‌ಪಿ) ಜೊತೆಗಿನ ಮೈತ್ರಿ ಕಡಿತಗೊಳ್ಳುತ್ತಿದ್ದಂತೆ, ಕಾಂಗ್ರೆಸ್‌ ಪಕ್ಷವು 2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ.

ಎಸ್‌ಪಿ, ಬಿಎಸ್‌ಪಿ ಹಾಗೂ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮಹಾಮೈತ್ರಿಯ ಭಾಗವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಮೂಲಗಳು ತಿಳಿಸಿವೆ.

‘ಎಸ್‌ಪಿ ಹಾಗೂ ಬಿಎಸ್‌ಪಿ ಕೇವಲ ಸೀಟು ತೆಗೆದುಕೊಳ್ಳಲು ಹೆಚ್ಚಿನ ಮುತವರ್ಜಿ ವಹಿಸುತ್ತಿದ್ದು, ಬಿಟ್ಟು ಕೊಡಲು ನಿರಾಕರಿಸುತ್ತಿವೆ. ಹೀಗಾದರೆ ಮೈತ್ರಿ ಹೇಗೆ ಸಾಧ್ಯ? ಇದರಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ಗೆ ಬೇಕಾದಷ್ಟು ಸೀಟು ಸಿಗುವುದು ಕಷ್ಟ’ ಎಂದು ರಾಜ್ಯದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ADVERTISEMENT

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 15 ಕಡೆಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲು ನಿರ್ಧರಿಸಿದೆ. 2014ರ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿತ್ತು.

ಮಹಾಮೈತ್ರಿಯಲ್ಲಿ ಕಾಂಗ್ರೆಸ್‌ ಸೇರ್ಪಡೆಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಉತ್ಸಾಹ ತೋರುತ್ತಿಲ್ಲ. ‘ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತನ್ನ ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಎಸ್‌ಪಿ ಸಿದ್ಧವಿಲ್ಲ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಬಿಎಸ್‌ಪಿ ಕನಿಷ್ಠ 40 ಸ್ಥಾನಗಳನ್ನು ಕೇಳುತ್ತಿದೆ. ಉಳಿದ ಸ್ಥಾನಗಳಲ್ಲಿ ಮಹಾಮೈತ್ರಿಯ ಪಕ್ಷಗಳು ಸ್ಪರ್ಧಿಸಲಿ ಎಂಬುವುದು ಬಿಎಸ್‌ಪಿಯ ನಿಲುವು.

‘ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಪ್ರತಿನಿಧಿಸುವ ರಾಯಬರೇಲಿ ಮತ್ತು ಅಮೇಠಿ ಕ್ಷೇತ್ರ ಸೇರಿದಂತೆಕಾಂಗ್ರೆಸ್‌ಗೆ ಐದು ಸ್ಥಾನಗಳನ್ನು ನೀಡಲು ಎಸ್‌ಪಿ ಸಹಮತ ವ್ಯಕ್ತಪಡಿಸಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.