ಉತ್ತರಾಖಂಡದಲ್ಲಿ ಮೇಘಸ್ಫೋಟ
ಕೊಚ್ಚಿ: ಉತ್ತರಾಖಂಡದಲ್ಲಿ ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಕೇರಳ ಮೂಲದ 28 ಮಂದಿ ಪ್ರವಾಸಿರು ನಾಪತ್ತೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ಬುಧವಾರ ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಕೇರಳ ಮೂಲದ 28 ಜನರ ಪೈಕಿ 20 ಜನರು ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ ಎಂದು ವರದಿಯಾಗಿದೆ. ಉಳಿದ ಎಂಟು ಮಂದಿ ಕೇರಳದ ವಿವಿಧ ಜಿಲ್ಲೆಯವರು ಎಂದು ಕಾಣೆಯಾದ ಪ್ರವಾಸಿಗರ ಸಂಬಂಧಿಕರು ಮಾಧ್ಯಮಗಳಿಗೆ ಹೇಳಿದ್ದಾರೆ.
ನಾಪತ್ತೆಯಾದ ಪ್ರವಾಸಿಗರ ಪೈಕಿ ದಂಪತಿಯೊಬ್ಬರ ಮಗ ಪ್ರತಿಕ್ರಿಯಿಸಿದ್ದು, ಒಂದು ದಿನದ ಹಿಂದೆ ಕೊನೆಯ ಬಾರಿಗೆ ಅವರೊಂದಿಗೆ ಮಾತನಾಡಿದ್ದೆ. ಆ ದಿನ ಬೆಳಿಗ್ಗೆ 8.30ರ ಸುಮಾರಿಗೆ ಅವರು ಉತ್ತರಕಾಶಿಯಿಂದ ಗಂಗೋತ್ರಿಗೆ ಹೊರಟಿದ್ದೇವೆ ಎಂದು ಹೇಳಿದ್ದರು. ಅವರು ಹೊರಟಿದ್ದ ಮಾರ್ಗಗಳಲ್ಲಿ ಭೂಕುಸಿತಗಳು ಸಂಭವಿಸಿವೆ. ಆಗಿನಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
10 ದಿನಗಳ ಉತ್ತರಾಖಂಡ ಪ್ರವಾಸವನ್ನು ಆಯೋಜಿಸಿದ್ದ ಹರಿದ್ವಾರ ಮೂಲದ ಪ್ರಯಾಣ ಸಂಸ್ಥೆಗೂ ಸಹ ಕಾಣೆಯಾದ ಪ್ರವಾಸಿಗರ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ
ಮೇಘಸ್ಫೋಟ ಪರಿಣಾಮ ಉತ್ತರಾಖಂಡದ ಉತ್ತರಕಾಶಿಯಲ್ಲಿ ಮಂಗಳವಾರ ದಿಢೀರ್ ಪ್ರವಾಹ ಸಂಭವಿಸಿದ್ದು, ಐವರು ಮೃತಪಟ್ಟು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಧರಾಲಿಯಲ್ಲಿ ಬುಧವಾರವೂ ಭಾರಿ ಮಳೆ ಮುಂದುವರಿದಿದೆ. ಮಳೆ ನಡುವೆಯೇ ಮಂಗಳವಾರ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕೊಚ್ಚಿ ಹೋಗಿ ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
‘ನಾಪತ್ತೆಯಾದವರಲ್ಲಿ 11 ಯೋಧರು ಸೇರಿದ್ದಾರೆ’ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.